ರಾಮಾಯಣ ೧೧೦

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೦

*ಅಸ್ಮಿನ್ ಕಾಲೇ ತು ಯದ್ಯುಕ್ತಂ ತದಿದಾನೀಂ ವಿಧೀಯತಾಮ್ ಗತಂ ತು ನಾನುಶೋಚಂತಿ ಗತಂ ತು ಗತಮೇವ ಹಿ*

_ಕುಂಭಕರ್ಣನ‌ ಸೂಕ್ತವಾದ ಮಾತುಗಳನ್ನು ಕೇಳಿ ರಾವಣನಿಗೆ ಸಿಟ್ಟು ಬರುತ್ತದೆ. ಆಗ ಅವನ‌ ಮಾತು- ಆದದ್ದು ಆಗಿಹೋಯಿತು. ಈ ಸಮಯದಲ್ಲಿ ಯಾವುದು ಯುಕ್ತವೋ ಅದನ್ನೀಗ ಮಾಡಬೇಕಾಗಿದೆ. ಕಳೆದದ್ದನ್ನು ನೆನೆಸಿಕೊಂಡು ಯಾವ ಬುದ್ಧಿಶಾಲಿಯೂ ಪಶ್ಚಾತ್ತಾಪಪಡುತ್ತ ಕುಳಿತುಕೊಳ್ಳುವುದಿಲ್ಲ. ಗತಿಸಿದ್ದು ಗತಿಸಿ ಹೋಯಿತು. ಏನು ಮಾಡಲಿ? ಗತಂ‌ ನ ಚಿಂತಯೇತ್ ಪ್ರಾಜ್ಞಃ ಎಂಬುದೊಂದು ಪ್ರಸಿದ್ಧ ಮಾತು. ಅನರ್ಥ ಘಟಿಸಿದ ನಂತರ ಯೋಚಿಸದೇ ಮುಂದುವರಿಯಬೇಕು. ಅಯ್ಯೋ ಎಂದು ಅಳುತ್ತಾ ಕೂತರೆ ಏನು ಪ್ರಯೋಜನ? ನಾವೂ ಅನೇಕ ಬಾರಿ ಹಿಂದಿನ ವಿಷಯಗಳನ್ನು ಯೋಚಿಸುತ್ತಾ ಸಮಯ ಹಾಳುಮಾಡುತ್ತೇವೆ. ಆದರದು ಉಚಿತವಾದುದಲ್ಲ._

*ಸ ಸುಹೃದ್ಯೋ ವಿಪನ್ನಾರ್ಥಂ ದೀನಮಭ್ಯವಪದ್ಯತೇ ಸ ಬಂಧುರ್ಯೋಪನೀತೇಷು ಸಾಹಾಯ್ಯಾಯೋಪಕಲ್ಪತೇ*

_ರಾವಣನ ಈ ಮಾತುಗಳು ಬಹಳ ಸುಂದರ. ಕಷ್ಟದಲ್ಲಿ ಸಿಕ್ಕಿಕೊಂಡಾಗ ಮುಂದೇನು ಎಂಬ ಯೋಚನೆ ಬಾಧಿಸಿದಾಗ ಯಾರು ನೆರವಾಗುವನೋ ಅವನೇ ನಿಜವಾದ ಸ್ನೇಹಿತ. ತಪ್ಪು ಮಾಡಿ ವಿಪತ್ತಿಗೆ ಒಳಗಾದ ವ್ಯಕ್ತಿಗೆ ಸಂಕಷ್ಟದಲ್ಲಿ ನೆರವಾಗುವವನೇ ಬಂಧು. ಕುಂಭಕರ್ಣ, ನೀನು ನನ್ನ ಸ್ನೇಹಿತನೂ ಬಂಧುವೂ ಆಗಿದ್ದರೆ ನನಗೆ ಸಹಕಾರ ಕೊಡು. ನಮ್ಮೊಡನೆ ಬಹಳ ಕಾಲ ಬಾಳಿದನೆಂದೋ, ಶಿಕ್ಷಣ ಪಡೆಯುವಾಗ ಜೊತೆಗಿದ್ದನೆಂದೋ, ನಮ್ಮ ಸುಖದ ಕ್ಷಣಗಳಲ್ಲಿ ಜೊತೆಗಿದ್ದನೆಂದೋ ಸ್ನೇಹಿತ ಅನ್ನುವುದು ಸರಿಯಲ್ಲ. ನಾವು ಆಪತ್ತಿನಲ್ಲಿ ಏನೂ ತೋಚದೇ ಕಣ್ಣೀರಿಡುತ್ತಿದ್ದಾಗ ಬಂದು ಧೈರ್ಯ ಕೊಟ್ಟು ಮುನ್ನಡೆಸುವವನೇ ನಿಜವಾದ ಸ್ನೇಹಿತ. ರಕ್ತ ಹಂಚಿಕೊಂಡಿದ್ದಕ್ಕೊ, ಮನೆಗೆ ಬರುವವನು ಎಂದೋ, ಸದಾ ಸಿಗುವನೆಂದೋ ಬಂಧು ಆಗಲಾರರು. ನಾವು ತಪ್ಪು ಮಾಡಿ ಶಿಕ್ಷೆ ಅನುಭವಿಸುವ ಕಾಲದಲ್ಲೂ ನಮ್ಮನ್ನು ದೂರವಿಡದೇ ಸಹಾಯ ಮಾಡಲು ಯಾರು ಮುಂದಾಗುವನೋ ಅವನೇ ನಿಜಬಂಧು. ಉಳಿದವರೆಲ್ಲ ಹೆಸರಿಗೆ ಮಾತ್ರ ಬಂಧುಗಳು. ನಾವು ತಪ್ಪು ಮಾಡಿದ್ದು ತಿಳಿದೂ ಬುದ್ಧಿ ಹೇಳಿ ಹೆದರದಿರು ಎಂದು ಧೈರ್ಯ ತುಂಬಿ ಕೈ ಹಿಡಿದು ನಡೆಸುವ ಕಾರ್ಯವೇ ಬಂಧುತ್ವ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩