ಧಾರ್ಮಿಕ ಆಚರಣೆ ೧೦

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೧೦

*ಧ್ಯಾನ*

_ಸ್ನಾನ,ಆಸನ,ಆಚಮನ, ಪ್ರಾಣಾಯಾಮ ಇವಿಷ್ಟರ ಬಗ್ಗೆ ಕೆಲವು ಮಾಹಿತಿ ನೋಡಿದೆವು. ಪ್ರಾಣಾಯಾಮದ ಬಗ್ಗೆ ಬಹಳಷ್ಟು ಮತಗಳಿರುವುದಿಂದ ಅನೇಕ ಬಗೆಯ ಅಭಿಪ್ರಾಯಗಳು ಬಂದವು. ಮತಗಳನೇಕವಾದ್ದರಿಂದ ಎಲ್ಲವೂ ಸರಿಯೇ. ಈಗ ಧ್ಯಾನದ ಬಗೆಗೆ ನೋಡೋಣ. *ಧ್ಯೈ ಚಿಂತಾಯಾಂ*  ಎಂಬ ಧಾತುವಿಗೆ ಭಾವಾರ್ಥಕದಲ್ಲಿ ಲ್ಯುಟ್ ಪ್ರತ್ಯಯ ಬಂದು ಈ ಪದ ಉಂಟಾಗುತ್ತದೆ. ಅರ್ಥವೇ ವಿವರಿಸುವಂತೆ ಚಿಂತಿಸುವುದೇ ಧ್ಯಾನ. ಏನಪ್ಪ ಇವನು ಚಿಂತೆ ಮಾಡಬೇಡಿ ಧ್ಯಾನ ಮಾಡಿ ಎಂದೆಲ್ಲಾ ನುಡಿಯುವರು ಹಿರಿಯರು ಎಂದರೆ ಬೇರೆಯದನ್ನು ಚಿಂತಿಸದೇ ದೇವರನ್ನು ಮಾತ್ರ ಚಿಂತಿಸಿ ಎನ್ನುತ್ತವೆ ಶಾಸ್ತ್ರಗಳು._

*ಚಿಂತನಮ್ ಅಂತರೇಂದ್ರಿಯ ವೃತ್ತಿ ಪ್ರವಾಹಃ ಅನ್ಯ ನಿಸ್ಪೃಹಾ ತದ್ರೂಪಪ್ರತ್ಯಯೈವೇಕ ಸಂತತಿಃ*

_ಚಿಂತನ ಅಂದರೆ ಹೊರಗಿನ ಇಂದ್ರಿಯಗಳಿಗೆ ವಿರಾಮ ಕೊಟ್ಟು ಮನಸ್ಸೆಂಬ ಮಹಾ ಇಂದ್ರಿಯವನ್ನು ಜಾಗೃತವಾಗಿಸಿ, ಯಾವ ಬಗೆಯ ಆಸಕ್ತಿಗಳನ್ನೂ ಇಟ್ಟುಕೊಳ್ಳದೆ ಆ ದೇವನೆಂಬ ಒಂದನ್ನು ಮಾತ್ರ ಚಿಂತಿಸುವುದೇ ಧ್ಯಾನ. ಏನು ಮಾಡೋಣ ಹೇಳಿ! ಕಣ್ಣು ಮುಚ್ಚಿದರೆ ಎದುರಿರುವರಿಗಿಂತ ಹೆಚ್ಚು ರೂಪಗಳು ಗೋಚರಿಸುವ ನಮಗೆ ಭಗವದ್ರೂಪ ಕಾಣುವುದೇ! ಕಂಡರೂ ಕ್ಷಣಮಾತ್ರದಲ್ಲಿ ನಮ್ಮ ಮನವು ಬೇರೆಯ ಕಡೆಗೆ ತೊಡಗಿಕೊಳ್ಳುತ್ತದೆ. ಇಂದ್ರಿಯಗಳೆಲ್ಲವೂ ನಾಮುಂದು ತಾಮುಂದೆಂದು ತಮ್ಮ ಇಷ್ಟಾರ್ಥ ಈಡೇರಿಕೆಗೆ ಹಾತೊರೆಯುತ್ತವೆ. ನಿಸ್ಪೃಹತೆ ಹತ್ತಿರವೂ ಸುಳಿಯಲಾರದು. ಧ್ಯಾನದಲ್ಲೂ ಪ್ರಯೋಜನವನ್ನೇ ಬಯಸುವವರು ನಾವು._

*ಬ್ರಹ್ಮಾತ್ಮಚಿಂತಾಧ್ಯಾನಂ ಧಾರಣಾ ಮನಸೋ ಧೃತಿಃ*

_ವೇದಾಂತಿಗಳೆಲ್ಲರೂ ಒಕ್ಕೊರಲಿನಿಂದ ಒಪ್ಪುವ ಒಳಗಿನ ಒಂದು ಶಕ್ತಿಗೂ, ನಮ್ಮ ದೇಹದಲ್ಲಿ ಮಾತ್ರ ಸದ್ಯಕ್ಕೆ ವಾಸವಾಗಿರುವ ಆತ್ಮನಿಗೂ ಇರುವ ಸಂಬಂಧದ ಬಗ್ಗೆಯೋ ಮನಸ್ಸನ್ನು ಏಕಾಗ್ರತೆಯಿಂದ ಇರಿಸಿ ಚಿಂತಿಸುವುದೇ ಧ್ಯಾನ. ಇದಕ್ಕಾಗಿ ಮೊದಲು ದೇವರದ್ದಿರಲಿ, ನಮ್ಮ ಅಸ್ತಿತ್ವವನ್ನಾದರೂ ಒಪ್ಪಬೇಕಾಗುತ್ತದೆ. ಬುಡವೇ ಕುಸಿದಾಗ ಮೇಲೆ ಹಾರಬಹುದಷ್ಟೇ ಹೊರತು ನಿಲ್ಲಲಾಗದು._

*ಪ್ರಾಣಾಯಾಮೈರ್ದ್ವಾದಶಭಿರ್ಯಾವತ್ಕಾಲೋ ಹೃತೋ ಭವೇತ್ ಯಸ್ತಾವತ್ಕಾಲಪರ್ಯಂತಂ ಮನೋ ಬ್ರಹ್ಮಣಿ ಧಾರಯೇತ್ ತಸ್ಯೈವ ಬ್ರಹ್ಮಣಾ ಪ್ರೋಕ್ತಂ ಧ್ಯಾನಂ ದ್ವಾದಶ ಧಾರಣಾ*

_ಮೇಲಿನ ವಾಕ್ಯವಳಂತೆ ಹನ್ನೆರಡು ಪ್ರಾಣಾಯಾಮ ಮಾಡುವಷ್ಟು ಕಾಲ‌ ಅಂದಾಜು ಆರು ನಿಮಿಷಾದರೂ ಮನವನ್ನು ಬ್ರಹ್ಮನಲ್ಲಿರಿಸಿದರೆ ಆಗ ಅದು ಧ್ಯಾನವೆನಿಸುತ್ತದೆ. ಅದಕ್ಕಿಂತ ಕಡಿಮೆ ಸಮಯದ ಅಂತಹ ಪ್ರಯತ್ನ ಏಕಾಗ್ರತೆಯ ಸಂಕೇತವೇ ಹೊರತು ಅದೇ ಧ್ಯಾನವಾಗದು. ಮುಂದೆ ಇನ್ನೊಂದಷ್ಟು ಅರಿಯೋಣ......_

http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩