ರಾಮಾಯಣ ೧೦೮

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೮

*ತ್ರಯಾಣಾಂ ಪಂಚಧಾ ಯೋಗಂ ಕರ್ಮಣಾ ಯಃ ಪ್ರಪಶ್ಯತಿ ಸಚಿವೈಃ ಸಮಯಂ ಕೃತ್ವಾ ಸ ಸಭ್ಯೇ ವರ್ತತೇ ಪಥಿ*

_ಇದೊಂದು ಒಗಟಿನ ತರಹದ ಕುಂಭಕರ್ಣನ ಮಾತು. ಮೂರರನ್ನು ಐದರಿಂದ ಜೋಡಿಸಿದಾಗ ಮಾರ್ಗವು ಸುಗಮವಾಗುತ್ತದೆ. ರಾವಣಾ, ಕ್ಷಯ-ವೃದ್ಧಿ- ಸ್ಥಾನಗಳೆಂಬ ಮೂರು ಬಗೆಯ ಕರ್ಮಗಳಿಗೆ ಆರಂಭೋಪಾಯ, ಪುರುಷನ ದ್ರವ್ಯಸಂಪತ್ತು, ದೇಶ- ಕಾಲ ವಿಭಾಗ, ವಿಪತ್ತಿ ಪ್ರತೀಕಾರ, ಕಾರ್ಯಸಿದ್ಧಿ ಇವುಗಳನ್ನು ಜೋಡಿಸಬೇಕು. ಕ್ಷಯ ಎಂದರೆ ತಾನು ದುರ್ಬಲನಾಗಿದ್ದಾಗ ವೈರಿಯೊಡನೆ ನಡೆಸಬೇಕಾದ ಸಾಮೋಪಾಯ. ವೃದ್ಧಿ ಎಂದರೆ ತಾನು ಪ್ರಬಲನಾಗಿದ್ದಾಗ ನಡೆಸಬೇಕಾದ ದಂಡವೇ ಮೊದಲಾದ ಕಾರ್ಯ. ಸ್ಥಾನ ಅಂದರೆ ತಾನೂ ಶತ್ರುವೂ ಪ್ರಬಲನಾಗಿದ್ದಾಗ ಅಂದರೆ ಸಮಬಲವಿದ್ದಾಗ ನಡೆಸಬೇಕಾದ ದಾನ ಅಥವಾ ಭೇದ.  ಕಾರ್ಯದ ಆರಂಭದಲ್ಲಿ ಸರಿಯಾಗಿ ಉಪಾಯ ಮಾಡುವುದು. ಎರಡನೆಯದು ನಮ್ಮ ಶಕ್ತಿ ಸಾಮರ್ಥ್ಯ ಸಂಪತ್ತು ಇವುಗಳನ್ನು ಪರೀಕ್ಷಿಸುವುದು. ಆಪತ್ತು ಎದುರಾದರೆ ಅಥವಾ ಯುದ್ಧ ಘಟಿಸಿದರೆ ಸೈನ್ಯ ಶಕ್ತಿ ಇದೆಯೇ, ಆಹಾರ ಹಾಗೂ ಅವಶ್ಯಕ ಸಾಮಗ್ರಿಗಳು ಸಾಕಷ್ಟು ಇವೆಯೇ ಎಂದು ನೋಡುವುದು. ಮೂರನೆಯದು ಪರರ ಜೊತೆ ಕ್ಷಯ ವೃದ್ಧಿ ಅಥವಾ ಸ್ಥಾನ ನಡೆಸಲು ಈಗ ಕಾಲವು ಯೋಗ್ಯವಾಗಿದೆಯೇ , ಈ ಪ್ರದೇಶದಲ್ಲಿ ಯಶಸ್ಸು ದೊರಕೀತೇ ಇತ್ಯಾದಿ ವಿಚಾರ. ನಾಲ್ಕನೆಯದು ವಿಪತ್ತು ಬಂದರೆ ಹೇಗೆ ಪ್ರತೀಕಾರ ತೀರಿಸಿಕೊಳ್ಳಬಹುದೆಂಬ ಮುಂದಾಲೋಚನೆ. ಕೊನೆಯದಾಗಿ ಎಲ್ಲಾ ವಿಚಾರಗಳಿಂದ ನಾವು ಕೈಗೊಂಡ ಕಾರ್ಯವನ್ನು ಸಾಧಿಸುವುದು. ಇದು ಎಲ್ಲಾ ಕಾಲಕ್ಕೂ ರಾಜರು ಅನುಸರಿಸಬೇಕಾದ ನೀತಿ. ಇದನ್ನು ಏಕೆ ನೀ ಅರಿಯದೇ ಹೋದೇ ಎಂದು ಪ್ರಶ್ನಿಸುತ್ತಿದ್ದಾನೆ ಕುಂಭಕರ್ಣ.ಆಧುನಿಕ ಕಾಲದಲ್ಲೂ ಇವೆಲ್ಲವೂ ಅನ್ವಯಿಸುವ ನಿಯಮಗಳು._

*ಧರ್ಮಮರ್ಥಂ‌ ಚ ಕಾಮಂ‌ ಚ ಸರ್ವಾನ್ ವಾ ರಕ್ಷಸಾಂ ಪತೇ ಭಜತೇ ಪುರುಷಃ ಕಾಲೇ ತ್ರೀಣಿ ದ್ವಂದ್ವಾನಿ ವಾ ಪುನಃ*  

_ಇನ್ನೊಂದು ಉತ್ತಮ ಮಾತು. ರಾಜನೇ, ಪುರುಷನು ಧರ್ಮಾರ್ಥಕಾಮಗಳಲ್ಲಿ ಯಾವುದರೊಂದನ್ನಾಗಲೀ, ಎರಡನ್ನಾಗಲೀ, ಮೂರನ್ನು ಸೇರಿ ಆಗಲಿ ಸೇವಿಸಬಹುದು. ಅದರೆ ಅದಕ್ಕೆ ಒಂದು ಯೋಗ್ಯ ಕಾಲ ಇರಬೇಕು. ಚಕ್ರವರ್ತಿ ಇರಲಿ ಸಾಮಂತರಿರಲಿ‌ ಈ ಮೂರರಲ್ಲಿ ಧರ್ಮವನ್ನೇ ಶ್ರೇಷ್ಠವೆಂದು ತಿಳಿಯದಿದ್ದಲ್ಲಿ ಅವನು ಕಲಿತೆದ್ದಲ್ಲವೂ ವ್ಯರ್ಥ. ಧರ್ಮದ ಮಹತ್ವ ಅರಿಯದಿದ್ದರೆ ಅವನು ಅಧೋಗತಿ‌ ಹೊಂದುವುದು ನಿಶ್ಚಿತ. ಅಣ್ಣಾ ನಿನ್ನ ಪರಿಸ್ಥಿತಿಯೂ ಪ್ರಕೃತ ಹೀಗೇ ಆಗಿದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩