ಸ್ವಪ್ನವಾಸವದತ್ತ ೮

🌼 ಸ್ವಪ್ನವಾಸವದತ್ತ ಎಸಳು-೮🌼

*ऱज्वायतां च विरलां च नतोन्नतां च सप्तर्षिवंशकुटिलां च निवर्तनेषु । निर्मुच्यमानभुजगोदरनिर्मलस्य सीमामिवाम्बरतलस्य विभज्यमानाम् ।।*

_ಶ್ಲೋಕದಲ್ಲಿ ಋ ಬದಲಿಗೆ ರ ಬಳಸಿದ್ದೇನೆ. ಕೀಪಾಡ್ ಅಸಹಕಾರ. ಪಕ್ಷಿಗಳ ಸಾಲೊಂದು ಆಕಾಶದಲ್ಲಿ ನೃತ್ಯಗೈಯುತ್ತಿದೆ. ಉದಯನನು ವಿದೂಷಕನ ಬಳಿ ಅದನ್ನು ವರ್ಣಿಸುತ್ತಿದ್ದಾನೆ.  ಕೆಲವೊಮ್ಮೆ ಸರಳ ರೇಖೆಯಲ್ಲಿ ಅಂದರೆ ನೇರವಾಗಿ ಹೋಗುತ್ತಿವೆ. ಕೆಲವೊಮ್ಮೆ ಆಯತಾಕಾರದಲ್ಲಿ ಚಾಚಿಕೊಂಡಂತೆ ಹೋಗುತ್ತಿವೆ. ಹೀಗೆ ಕೆಲವೊಮ್ಮೆ ಅವುಗಳ ಗಮನ ತುಂಬಾ ಘನವಾಗಿದೆ. ಪರಸ್ಪರ ಹಕ್ಕಿಗಳು ಒಂದಕ್ಕೊಂದು ತಾಗಿಕೊಂಡು ಹೋಗುವಂತೆ ಕಾಣುತ್ತಿದೆ. ಇನ್ನು ಕೆಲವೊಮ್ಮೆ ಒಂದೊಂದು ಖಗವೂ ಬಹಳ ದೂರದೂರದಲ್ಲಿ ಚಲಿಸುವಂತೆ ಕಾಣುತ್ತಿದೆ. ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ತುಂಬಾ ಕೆಳಗೆ ಹೀಗೆ ಎತ್ತರ ತಗ್ಗುಗಳನ್ನು ಬದಲಿಸುತ್ತಾ ಚಲಿಸುತ್ತಿವೆ. ಅಂಬರದಲ್ಲಿ ಕಾಣುತ್ತಿರುವ ನಕ್ಷತ್ರಪುಂಜಗಳಲ್ಲಿ ಒಂದಾದ ಸಪ್ತರ್ಷಿಮಂಡಲದಂತೆ ಪಕ್ಷಿಗಳ ಗುಂಪು ಶೋಭಿಸುತ್ತಿದೆ. ಆ ಸಪ್ತರ್ಷಿಮಂಡಲವು ಎಷ್ಟು ವಕ್ರವಾಗಿದೆಯೋ ಇವುಗಳ ಗಮನವೂ ಅದರಂತೆಯೇ ವಕ್ರವಾಗಿದೆ. ಆ ನಕ್ಷತ್ರಪುಂಜ ರಾತ್ರಿ ಶೋಭಿಸಿದರೆ ಇವುಗಳ ಹಗಲಿನಲ್ಲಿ ಶೋಭಿಸುತ್ತಿವೆ. ಕವಿ ಇಲ್ಲಿ ಒಂದು ಸುಂದರ ಉಪಮೆಯನ್ನು ಬಳಸಿದ್ದಾನೆ. ಶರದೃತು ಬಂದಿದೆ. ಹಾಗಾಗಿ ಅಂಬರದಲ್ಲಿದ್ದ ಮೋಡಗಳು ಮರೆಯಾಗಿವೆ. ವರ್ಷಾಕಾಲದ ಕಪ್ಪಾದ  ಮೇಘಗಳೆಲ್ಲವೂ ಮಳೆ ಸುರಿಸಿ ಈಗ ಆಕಾಶ ಶುಭ್ರವಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಹಾವುಗಳು ತಮ್ಮ ಕಪ್ಪು ಪೊರೆಯನ್ನು ಕಳಚಿ ಹೊಸ ಚರ್ಮದ ಬೆಳವಣಿಗೆಯನ್ನು ಎದುರು ನೋಡುತ್ತವೆ. ಆ ಕಾಲದಲ್ಲಿ ಅವುಗಳ ಮೈ ಬಹಳ ಶುಭ್ರವಾಗಿರುತ್ತದೆ. ವಸ್ತುತಃ ಕೊಳಕಿನಂತೆ ಕಾಣುವ ಸರ್ಪಗಳ ದೇಹ ಈ ಕಾಲದಲ್ಲಿ ಫಳಫಳನೆ ಹೊಳೆಯುತ್ತದೆ. ಅದರಂತೆ ಆಕಾಶವೂ ಮೋಡಗಳೆಂಬ ಮೇಲ್ಮೈಯನ್ನು ಕಳಚಿಕೊಂಡು ಈಗ ಶುಭ್ರವಾಗಿ ನಮ್ಮ ಕಣ್ಣಿಗೆ  ನೀಲಿ ಬಣ್ಣದಿಂದ ಹೊಳೆಯುತ್ತಿದೆ. (ಆಕಾಶಕ್ಕೆ ನಿಜಕ್ಕಾದರೆ ಬಣ್ಣವಿಲ್ಲ.) ಈಗ ಹಾರುತ್ತಿರು ಅಸಂಖ್ಯಾತ ಪಕ್ಷಿಗಳ ಸಾಲು ಈ ಆಕಾಶದ ಗಡಿಯನ್ನು ಗುರುತಿಸಿ ವಿಭಾಗಿಸುವಂತೆ ಕಾಣುತ್ತಿದೆ. ಆಕಾಶದ ಮಧ್ಯದಲ್ಲಿ ಇದು ಈ ಪ್ರದೇಶ, ಇದು ಬೇರೆ ಇತ್ಯಾದಿ ವಿಭಾಗ ಮಾಡಲು ಗೆರೆ ಎಳೆದರೆ ಹೇಗೆ ಕಾಣುವುದೋ ಅಂತೆಯೇ ಪಕ್ಷಿಗಳ ಸಾಲೂ ವಿಭಾಜಕರೇಖೆಯಂತೆ ಇದೆ. ಅದೂ ಒಂದು ಸುಂದರ ರಚನೆಯಾದ ಕಾರಣ ಆಕರ್ಷಕವೂ ಆಗಿದೆ. ಕಾಳಿದಾಸನು ಹಿಮಾಲಯವನ್ನು ಮಾನದಂಡವೆಂದಂತೆ ಭಾಸನಿಲ್ಲಿ ಪಕ್ಷಿಗಳ ಸಹಜ ಚಲನೆಯನ್ನೇ ವಿಭಾಜಕರೇಖೆಯನ್ನಾಗಿಸಿದ್ದಾನೆ. ಕವಿಗೆ ಕಾಣುವ ನಿಸರ್ಗವೆಲ್ಲವೂ ಸುಂದರ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩