ಮಹಾಭಾರತ೬೨
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೨
*ಕಿಮರ್ಥಮಾವೃತಾ ಲೋಕಾ ಮಮೈತೇ ತಪಸಾರ್ಜಿತಾಃ ಕಿಂ ಮಯಾ ನ ಕೃತಂ ತತ್ರ ಯಸ್ಯೇದಂ ಕರ್ಮಣಃ ಫಲಮ್*
_ಮಂದಪಾಲ ಮಹರ್ಷಿಯು ಯಮನ ಸಹಚರರ ಬಳಿ ಹೀಗೆ ಪ್ರಶ್ನಿಸುತ್ತಾನೆ. ತಪಸ್ಸಿನ ಸಂಪಾದನೆಯಾಗಿದ್ದರೂ ಪುಣ್ಯಲೋಕಗಳು ನನಗೇಕೆ ನಿರಾಕೃತವಾಗಿವೆ? ಪಿತೃಲೋಕ ಫಲ ಕೊಡುವ ಯಾವ ಕರ್ಮ ನಾನು ಆಚರಿಸಲಿಲ್ಲ? ಇನ್ನೂ ಯಾವ ಕರ್ಮವನ್ನು ನಾನು ಮಾಡಬೇಕೆಂದು ಹೇಳಿರಿ. ಆಗ ಆ ದೇವತೆಗಳು ಹೀಗೆ ನುಡಿದರು - ಲೋಕದಲ್ಲಿ ಶಾಸ್ತ್ರೋಕ್ತವಾದ ಕರ್ಮಗಳಿಂದಲೂ, ಬ್ರಹ್ಮಚರ್ಯೆಯಿಂದಲೂ, ಸಂತಾನದಿಂದಲೂ ಮನುಷ್ಯರು ಋಣಿಗಳಾಗಿ ಹುಟ್ಟುತ್ತಾರೆ. ಈ ಋಣವೆಲ್ಲವೂ ಯಜ್ಞದಿಂದಲೂ, ತಪಸ್ಸಿನಿಂದಲೂ, ಸುತ ಅಥವಾ ಸುತೆಯರಿಂದಲೂ ಪರಿಹರಿಸಲ್ಪಡುತ್ತದೆ. ನಿನಗೆ ಸಂತತಿ ಇಲ್ಲದ ಕಾರಣ ಈ ಲೋಕ ನಿರಾಕೃತವಾಗಿದೆ. ಹಾಗಾಗಿ ಸಂತತಿಯನ್ನು ಹೊಂದಲು ಪ್ರಯತ್ನಿಸು ಎಂದರು. ಆಗ ಆ ಮಹಾಮಹಿಮ ಋಷಿಯು ಕೂಡಲೇ ಸಂತಾನ ಪಡೆಯುವ ಇಚ್ಛೆಯಿಂದ ಶಾರ್ಙಕ ಎಂಬ ಪಕ್ಷಿಯಾಗಿ ಜರಿತೆಯೆಂಬ ಇನ್ನೊಂದು ಅದೇ ಜಾತಿಯ ಪಕ್ಷಿಯಲ್ಲಿ ಸಮಾಗಮ ಮಾಡಿ ಬ್ರಹ್ಮವಾದಿಗಳಾದ ನಾಲ್ಕು ಪುತ್ರರಿಗೆ ಜನ್ಮವಿತ್ತನು. ಇನ್ನೂ ಹೊಟ್ಟೆಯಿಂದ ಹೊರಬರದ ಮೊಟ್ಟೆಯ ರೂಪದಲ್ಲಿ ಇರುವ ಆ ಚಿಕ್ಕಮಕ್ಕಳನ್ನು ಅಂದರೆ ಪಕ್ಷಿಗಳನ್ನು ಅಲ್ಲಿಯೇ ಬಿಟ್ಟು ಆ ಋಷಿಯು ಲಪಿತೆ ಎಂಬ ಇನ್ನೊಂದು ಪಕ್ಷಿಯ ಬಳಿ ಹೋದನು. ಇತ್ತ ಕಡೆ ಜರಿತೆಯಾದರೋ ಪುತ್ರಸ್ನೇಹದಿಂದ ತನ್ನ ಮೊಟ್ಟೆಗಳನ್ನು ಹೊರಹಾಕದೇ ಖಾಂಡವವನದಾಹದ ಸಮಯದಲ್ಲಿ ಕಾಪಾಡಿದಳು. ಅದೇ ಸಮಯದಲ್ಲಿ ಲಪಿತೆಯೊಡನೆ ಸಂಸಾರ ನಡೆಸುತ್ತಿದ್ದ ಆ ಪಕ್ಷಿ ರೂಪದ ಋಷಿಯು ತನ್ನ ಮಕ್ಕಳಿಗೆ ಆಪತ್ತಾಗುವುದೆಂದು ಶಂಕಿಸಿ ಅಗ್ನಿಯನ್ನು ಬಗೆಬಗೆಯಲ್ಲಿ ಸ್ತುತಿಸಿದನು. ಈ ಸ್ತುತಿ ಸುಂದರವಾಗಿದೆ._
_ಅಗ್ನಿಯೇ ನೀನು ದೇವಮುಖನಾಗಿರುವೆ. ಹವಿಸ್ಸನ್ನು ಒಯ್ಯುವವನು ಹಾಗೂ ಪ್ರಾಣಿಗಳ ಹೃದಯದಲ್ಲಿ ಗೂಢವಾಗಿ ಸಂಚರಿಸುವವನು ನೀನೇ ಆಗಿರುವೆ. ನೀನು ಒಬ್ಬನೇ ಆಗಿದ್ದರೂ ಆಕಾಶದಲ್ಲಿ ಮಿಂಚಿನ ರೂಪದಲ್ಲೂ, ಭೂಮಿಯಲ್ಲಿ ಬೆಂಕಿಯ ರೂಪದಲ್ಲೂ, ಪ್ರಾಣಿಗಳಲ್ಲಿ ಜಠರಾಗ್ನಿಯ ರೂಪದಲ್ಲೂ ನೆಲೆಸಿರುವೆ. ಜ್ಞಾನಿಗಳು ಎಂಟು ವಿಧ ಕಲ್ಪಸಿ ಯಜ್ಞವಾಹನನ್ನಾಗಿ ನಿನ್ನನ್ನು ಸ್ತುತಿಸಿದ್ದಾರೆ. ವಿಶ್ವದ ಸೃಷ್ಟಿಕರ್ತನು ನೀನೇ. ಯಾಗಗಳಲ್ಲಿ ನಿನಗೆ ನಮಸ್ಕರಿಸಿ ಶಾಶ್ವತ ಗತಿಯನ್ನೂ ಸಂಸಾರ ಸಮೇತ ಪಡೆಯುತ್ತಾರೆ. ಮೊದಲು ಜಲವನ್ನು ಸೃಷ್ಟಿಸಿದವನೂ ನೀನೇ, ಜ್ವಲಿಸುವವನು ನೀನೇ,ಧಾತೃವು ನೀನೇ, ಬೃಹಸ್ಪತಿಯೂ ನೀನೇ, ಅಶ್ವಿನಿಗಳು-ಮಿತ್ರರು- ಮಿತ್ರನು-ವಾಯುವೂ ನೀನೇ ಆಗಿರುವೆ. ಹೀಗೆ ಎಂಟು ಶ್ಲೋಕಗಳಲ್ಲಿ ಅಗ್ನಿಯನ್ನು ಸ್ತುತಿಸಿದ್ದಾನೆ. ಅಗ್ನಿ ಸ್ತೋತ್ರವೆಂದೇ ಇದು ಪ್ರಸಿದ್ಧ. ಅಗ್ನಿಯು ಪ್ರಸನ್ನನಾಗಿ ಅವನ ಮಕ್ಕಳನ್ನು ದಹಿಸದೇ ಬಿಟ್ಟು ಬಿಟ್ಟನು. ಹೀಗೆ ನಾಲ್ಕು ಶಾರ್ಙಕ ಪಕ್ಷಿಗಳು ಉಳಿದವು._
ಮುಂದಿನ ವಿಷಯ ಮುಂದೆ ನೋಡೋಣ....._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ