ಮಹಾಭಾರತ ೫೯

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೯

*ಅಯಃಕಣಪಚಕ್ರಾಶ್ಮ ಭುಶುಂಡ್ಯುದ್ಯತಬಾಹವಃ ಕೃಷ್ಣಪಾರ್ಥೌ ಜಿಘಾಂಸಂತಃ ಕ್ರೋಧಸಂಮೂರ್ಛಿತೌಜಸಃ*

_ಆ ಖಾಂಡವ ವನದಲ್ಲಿ ವಾಸವಾಗಿದ್ದ ದೇವ-ದಾನವ-ಯಕ್ಷ-ರಾಕ್ಷಸ- ಸರ್ಪಗಳು ಅವರೀರ್ವರ ಮೇಲೆ ಮುಗಿಬಿದ್ದು ನಾನಾ ಅಸ್ತ್ರಗಳನ್ನು ಶಸ್ತ್ರಗಳನ್ನು ಪ್ರಯೋಗ ಮಾಡುತ್ತಾರೆ. ಕಬ್ಬಿಣದ ಗುಂಡುಗಳನ್ನು ಸುರಿಸುವ ಯಂತ್ರಗಳು ( ಈಗಿನ ಗ್ರೇನೆಡ್ ಮಾದರಿ ಗುಂಡುಗಳು ಬರಬಹುದು ) ಚಕ್ರಾಶ್ಮಗಳು ( ದ್ರೋಣ್ ಮಾದರಿ ಅಸ್ತ್ರಗಳಿರಬಹುದು ) ಭುಶುಂಡಿ ಅಂದರೆ ಕಲ್ಲಿನ ಆಯುಧಗಳು ಹೀಗೆ ಬಗೆಬಗೆಯ ಪ್ರಯೋಗಗಳನ್ನು ಮಾಡಿದರು. ಆದರೆ ಅವುಗಳಾವುವೂ ಅವರ ಪರಾಕ್ರಮಕ್ಕೆ ಸಾಟಿಯಾಗಲಿಲ್ಲ. ಕೃಷ್ಣನ ಚಕ್ರ ಹಾಗೂ ಅರ್ಜುನನ ಬಾಣಗಳು ಶತ್ರುಗಳ ಶಸ್ತ್ರಾಸ್ತ್ರಗಳನ್ನು ಕ್ಷಣಮಾತ್ರದಲ್ಲಿ ನುಚ್ಚುನೂರಾಗಿಸುತ್ತಿತ್ತು. ಹಿಂದಿನ ಅನೇಕ ಯುದ್ಧಗಳನ್ನು ನೋಡಿದರೆ ಶಸ್ತ್ರಾಸ್ತ್ರಗಳ ಅನ್ವೇಷಣೆ ಹಾಗೂ ಪ್ರಯೋಗದಲ್ಲಿ ಪೈಪೋಟಿ ಈಗಿನಂತೆ ಸಾಕಷ್ಟು ಇದ್ದದ್ದು ಕಂಡುಬರುತ್ತದೆ. ಒಂದು ಯುದ್ಧಕ್ಕೆ ಅಷ್ಟಷ್ಟು ಶಸ್ತ್ರಗಳನ್ನು ತಯಾರು ಮಾಡುವ ಕಾರಣ ಅವುಗಳ ಕೊಡುಕೊಳ್ಳುವಿಕೆ ಅಥವಾ ವ್ಯಾಪಾರವೂ ಬಹಳ ಜೋರಾಗಿತ್ತು ಎಂಬುದೂ ಅರಿವಾಗುತ್ತದೆ. ನಾವು ಸುಮ್ಮನೆ ಈಗಿನ ಕಾಲ ಘೋರ, ಎಷ್ಟು ಬಗೆಯ ಶಸ್ತ್ರಗಳು, ಎಂದೆಲ್ಲಾ ಉದ್ಗರಿಸಬಹುದಷ್ಟೇ. ಹಿಂದೆಯೂ ಇದರ ಹತ್ತರಷ್ಟು ಯುದ್ಧಗಳು ಹಾಗೂ ಶಸ್ತ್ರಾಸ್ತ್ರಗಳು ಇದ್ದವು._

*ಕಾಲದಂಡಂ ಯಮೋ ರಾಜಾ ಶಿಬಿಕಾಂ ಚ ಧನೇಶ್ವರಃ ಪಾಶಂ ಚ ವರುಣಸ್ತತ್ರ ವಿಚಕ್ರಂ ಚ ತಥಾ ಶಿವಃ*

_ಅನಂತರ ಕೋಪಗೊಂಡ ಇಂದ್ರನು ಐರಾವತದ ಮೇಲೇರಿ ಯುದ್ಧಕ್ಕೆ ಹೊರಡುತ್ತಾನೆ. ಇಂದ್ರನು ವಜ್ರಾಯುಧವನ್ನು ಹಿಡಿದುದನ್ನು ಕಂಡ ಉಳಿದ ದೇವತೆಗಳು ಯುದ್ಧಕ್ಕೆ ಧಾವಿಸಿ ಬರುತ್ತಾರೆ. ಯಮನು ಕಾಲದಂಡವನ್ನೂ, ಕುಬೇರನು ಗದೆಯನ್ನೂ, ವರುಣನು ಪಾಶವನ್ನೂ, ಶಿವನು ತ್ರಿಶೂಲವನ್ನೂ, ಅಶ್ವಿನಿ ದೇವತೆಗಳು ಹೊಳೆಯುವ ಓಷಧಿಗಳನ್ನೂ, ಧಾತೃವು ಧನುಸ್ಸನ್ನೂ, ಜಯನು ಮುಸಲವನ್ನೂ, ತ್ವಷ್ಟೃವು ಪರ್ವತವನ್ನೂ, ಮೃತ್ಯುವು ಕೊಡಲಿಯನ್ನೂ ( ಯಮ- ಮೃತ್ಯುದೇವತೆ ಬೇರೆ ಬೇರೆ ಗಮನಿಸಿ) ಅಂಶನು ಶಕ್ತಿಯನ್ನೂ ( ಯಾರ ಅಂಶ ಎಂಬ ಉಲ್ಲೇಖ ಇಲ್ಲ) ಅರ್ಯಮನು ಪರಿಘವನ್ನೂ, ಮಿತ್ರನು ಚಕ್ರವನ್ನೂ, ಪೂಷ-ಭಗ- ಸವಿತೃ ಇವರುಗಳು ಬಿಲ್ಲು ಬಾಣಗಳನ್ನು ಹಿಡಿದು ಯುದ್ಧ ಮಾಡಲಾರಂಭಿಸಿದರು. ರುದ್ರರು ವಸುಗಳು ಮರುತ್ತುಗಳು ವಿಶ್ವೇದೇವತೆಗಳು ಸಾಧ್ಯರು ತಮ್ಮ ತಮ್ಮ ತೇಜಸ್ಸಿನಿಂದ ಪ್ರಜ್ವಲಿಸುತ್ತಾ ಇವರೀರ್ವರನ್ನು ಎದುರಿಸಿದರು. ಇಲ್ಲಿ ದೇವ ಸಮೂಹವೇ ಇಂದ್ರನ ಜೊತೆಗೆ ಹೊರಟಿರುವುದು ವಿಶೇಷ ಸಂಗತಿ. ಅಶ್ವಿನೀ ದೇವತೆಗಳು ಆಯುಧವನ್ನಾಗಿ ಯಾವುದೋ ಸಸ್ಯಗಳನ್ನೇ ಹಿಡಿದು ಹೊರಟಿದ್ದು ಇನ್ನೂ ವಿಶೇಷ. ಎಷ್ಟೆಲ್ಲಾ ಪ್ರಯತ್ನಿಸಿದರೂ ವನದಹನದ ನಿವಾರಣೆಯ ಎಲ್ಲಾ ಯತ್ನಗಳನ್ನೂ ಪಾರ್ಥ ಕೃಷ್ಣರು ನಿವಾರಿಸಿದರು. ಇಲ್ಲಿ ದೇವತೆಗಳ ಒಗ್ಗಟ್ಟನ್ನು ಗಮನಿಸಬೇಕು. ಸರಿಯಿರಲಿ ತಪ್ಪಿರಲಿ ಇಂದ್ರನ ನೆರವಿಗೆ ಕೂಡಲೇ ಎಲ್ಲರೂ ಧಾವಿಸುವುದು ವಿಶೇಷ. ಸೋಲಾಗುವ ಅಂದಾಜಿದ್ದರೂ ಪಾಲ್ಗೊಂಡು ಹೋರಾಡುವುದು ಕಾರ್ಯ ಪೂರ್ಣ ಸಾಧಿಸುವ ಛಲದ ಗುರುತಾಗಿದೆ._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩