ರಾಮಾಯಣ ೧೦೯
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೯
*ಅನಭಿಜ್ಞಾಯ ಶಾಸ್ತ್ರಾರ್ಥಾನ್ ಪುರುಷಾಃ ಪಶುಬುದ್ಧಯಃ ಪ್ರಾಗಲ್ಭ್ಯಾದ್ವಕ್ತುಮಿಚ್ಛಂತಿ ಮಂತ್ರೇಷ್ವಭ್ಯಂತರೀಕೃತಾಃ*
_ಕುಂಭಕರ್ಣನು ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ. ತನಗೆ ಹಿತಕರವಾದದ್ದು ಯಾವುದು, ಯಾವುದು ತನ್ನ ಕರ್ತವ್ಯವಲ್ಲ ಇತ್ಯಾದಿ ಸಚಿವರೊಡನೆ ಆಲೋಚಿಸಿ ನಡೆಯುವ ರಾಜನು ದೀರ್ಘಕಾಲ ಬಾಳುತ್ತಾನೆ. ಕೆಲವೊಮ್ಮೆ ರಾಜನ ಬಳಿ ಪಶುಬುದ್ಧಿಯ ಮಂತ್ರಿಗಳೂ ಇರುತ್ತಾರೆ. ಶಾಸ್ತ್ರಾರ್ಥದ ಗಂಧವೂ ಅವರಿಗೆ ಇರುವುದಿಲ್ಲ. ಏನೂ ಅರಿಯದಿದ್ದರೂ ದುಡುಕಿನ ವಾಗ್ಜಾಲದಿಂದ ರಾಜನಿಗೆ ಸಲಹೆ ಕೊಡಲು ಮುಂದೆ ಬರುತ್ತಾರೆ. ಆ ಸಚಿವರಿಗೆ ಅರ್ಥಶಾಸ್ತ್ರವೂ ತಿಳಿಯದು, ಯಾವ ಶಾಸ್ತ್ರವೂ ತಿಳಿಯದು. ಶ್ರೇಯಸ್ಸನ್ನು ಬಯಸುವ ಯಾರೂ ಅಂತಹ ವ್ಯಕ್ತಿಗಳ ಮಾತನ್ನು ಕೇಳಬಾರದು. ಅವರು ಹೇಳುವುದು ಮೇಲ್ನೋಟಕ್ಕೆ ಹಿತವಾಗಿ ಕಂಡರೂ ಅದರ ಪರಿಣಾಮ ಅಹಿತವಾಗಿರುತ್ತದೆ. ಅವಿವೇಕದಿಂದ ಏನೇನೋ ಹಲುಬುತ್ತಾರೆ. ಕೆಲಸವನ್ನೇ ಕೆಡಿಸತಕ್ಕ ಅಂತಹವರನ್ನು ಮಂತ್ರಾಲೋಚನೆಯಲ್ಲಿ ಎಂದಿಗೂ ಸೇರಿಸಿಕೊಳ್ಳಬಾರದು. ಈ ಮಾತು ಎಷ್ಟು ಸತ್ಯವಾದುದು. ಈಗಲೂ ಹಿಂದೆಯೂ ನಮ್ಮ ಮುಖ್ಯಮಂತ್ರಿಗಳ ಅಥವಾ ಅಧಿಕಾರಿಗಳ, ಸಂಸ್ಥೆಗಳ ಮುಖ್ಯಸ್ಥರ ಬಳಿಯಲ್ಲಿ ಇಂತಹ ಬಿಳಿಯಾನೆಗಳು ಸಾಕಷ್ಟಿರುತ್ತವೆ. ಅವರನ್ನು ನಾಜೂಕಾಗಿ ಬದಿಗೆ ಸರಿಸಿದರೆ ಬಹಳ ಕಾಲ ಮೆರೆಯಬಹುದು. ಇಲ್ಲದಿದ್ದರೆ ಅವರ ಸಹವಾಸದಿಂದ ನಮ್ಮನ್ನು ಜನಗಳೇ ಮರೆಯಬಹುದು ಅಷ್ಟೇ._
*ಚಪಲಸ್ಯೇಹ ಕೃತ್ಯಾನಿ ಸಹಸಾನುಪ್ರಧಾನವತಃ ಛಿದ್ರಮನ್ಯೇ ಪ್ರಪದ್ಯಂತೇ ಕ್ರೌಂಚಸ್ಯ ಖಮಿವ ದ್ವಿಜಾಃ*
_ಅಣ್ಣಾ, ಇನ್ನು ಕೆಲವು ಮಂತ್ರಿಗಳು ತಮ್ಮ ಶತ್ರುಗಳ ಪಕ್ಷ ವಹಿಸಿ ತಮ್ಮ ಸ್ವಾಮಿಯನ್ನೇ ನಾಶಮಾಡಲು ಉದ್ದೇಶಿಸಿರುತ್ತಾರೆ. ಅವರು ತಮ್ಮ ಒಡೆಯನಿಂದ ಬೇಕೆಂದೇ ಅಕೃತ್ಯವನ್ನು ಪ್ರಚೋದನೆ ಕೊಟ್ಟು ಮಾಡಿಸುತ್ತಾರೆ. ಮಿತ್ರರಂತೆ ನಟಿಸುವ ಅವರು ಶತ್ರುಗಳೇ ಸರಿ. ಅಂತಹವರ ವ್ಯವಹಾರದಿಂದ ಅವರನ್ನು ಕಂಡುಹಿಡಿಯಬೇಕು. ಶತ್ರುಗಳು ನಮ್ಮ ಹುಳುಕುಗಳನ್ನು ಹುಡುಕುತ್ತಿರುತ್ತಾರೆ. ಅಲ್ಪ ಸ್ವಲ್ಪ ಕಂಡರೂ ಕ್ರೌಂಚ ರಂಧ್ರದಿಂದ ಪಕ್ಷಿಗಳು ಪ್ರವೇಶಿಸುವಂತೆ ರಾಜನ ಅಂತರಂಗವನ್ನು ಹೊಕ್ಕು ಅವನನ್ನು ಭೇದಿಸುತ್ತಾರೆ. ಕುಮಾರನ ಬಾಣದಿಂದ ಪರ್ವತಕ್ಕೆ ಉಂಟಾದ ರಂಧ್ರ ಸಣ್ಣದಾದರೂ ಪಕ್ಷಿಗಳಿಗೆ ಚಲಿಸಲು ಅಷ್ಟೇ ಸಾಕಾಗುತ್ತದೆ. ಅದರಂತೆ ವೈರಿಗಳು ಸಣ್ಣ ತಪ್ಪನ್ನೇ ಹಿಡಿದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಹೀಗಾಗಿ ರಾವಣಾ, ಎಷ್ಟು ಜಾಗರೂಕತೆಯಿಂದ ಇದ್ದರೂ ರಾಜನು ಕಡಿಮೆಯೇ ಸರಿ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ