ರಾಮಾಯಣ ೧೭೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೪🏝📖   


*ನ ಚಾಹುತಮಭೂತ್ತತ್ರ ಸ್ಖಲಿತಂ ವಾಪಿ ಕಿಂಚನ | ದೃಶ್ಯತೇ ಬ್ರಹ್ಮವತ್ಸರ್ವಂ ಕ್ಷೇಮಯುಕ್ತಂ ಹಿ ಚಕ್ರಿರೇ ||*

_ದಶರಥನ ಆ ಅಶ್ವಮೇಧದಲ್ಲಿ ಕೊಡಬೇಕಾದ ಆಹುತಿಗಳಾವುವೂ ಅಧ್ವರ್ಯುವಿನ ಅಥವಾ ಬ್ರಹ್ಮನ ಮರೆವು ಅಥವಾ ಗಮನಿಸದಿರುವ ಕಾರಣದಿಂದಾಗಿ ತಪ್ಪಿಹೋಗಲಿಲ್ಲ. ಬ್ರಹ್ಮನ ಕೆಲಸವೇ ಅದು. ಯಜ್ಞ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಆಮೂಲಾಗ್ರವಾಗಿ ಅವಲೋಕಿಸುವುದು. ಪ್ರಸ್ತುತ ಋಷ್ಯಶೃಂಗನೇ ಬ್ರಹ್ಮನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಬ್ರಹ್ಮನಾದವನಿಗೆ ಜ್ಞಾನ ಪೂರ್ಣತೆ ಇರಬೇಕಾಗುತ್ತದೆ. ವಯಸ್ಸಿನಲ್ಲಿ ಹಿರಿಯನು ಅಥವಾ ಕುಲಪುರೋಹಿತ ಅಥವಾ ಊರಿನ ಹಿರಿಯ ಅಥವಾ ಇಂತಹ ಮಠ-ದೇವಸ್ಥಾನದವನು ಇತ್ಯಾದಿ ಯಾವುದೂ ಬ್ರಹ್ಮತ್ವದ ಅರ್ಹತೆ ಅಲ್ಲ. ಮಾಡುವ ಕರ್ಮದ ಸಂಪೂರ್ಣ ಅರಿವಿದೆಯೋ ಇಲ್ಲವೋ ಎಂಬುದಷ್ಟೇ ಮುಖ್ಯ. ಲಕ್ಷಾಂತರ ಆಹುತಿಗಳಿದ್ದರೂ ಯಾವೊಂದೂ ತಪ್ಪದಂತೆ ಯಜ್ಞ ನಡೆಯುತ್ತಿತ್ತು. ಅಷ್ಟಲ್ಲದೇ ಯಾವ ಯಾವ ದೇವತೆಗೆ ಸಂಬಂಧಿಸಿದ ಮಂತ್ರ ಹೇಳುತ್ತಿದ್ದರೋ ತ್ಯಾಗವನ್ನು ಆಯಾ ದೇವತೆಗೇ ನೀಡುತ್ತಿದ್ದರು. ಇಂದ್ರನ ಮಂತ್ರ ಹೇಳಿ ಸೂರ್ಯನಿಗೆ ತ್ಯಾಗವನ್ನೋ ಅಥವಾ ವಿಷ್ಣುವಿನ ಮಂತ್ರ ಹೇಳಿ ರುದ್ರನಿಗೆ ತ್ಯಾಗವನ್ನೋ ನೀಡುತ್ತಿರಲಿಲ್ಲ. ಯಜ್ಞದಲ್ಲಿ ಇದು ಪ್ರಮುಖ ಅಂಗ. ಮಂತ್ರಗಳು ಯಾವ ದೇವತೆಗೆ ಪ್ರಸಕ್ತ ಯಜ್ಞದಲ್ಲಿ ಉಪಯೋಗಿಸಲ್ಪಡುತ್ತವೆ ಎಂಬುದರ ಅರಿವು ಇರಬೇಕು. ಅದಕ್ಕನುಸಾರವಾಗಿ ಕಾರ್ಯ ನಿರ್ವಹಿಸಬೇಕು. ಹಾಗಲ್ಲದೇ ಯಾವುದೋ ಮಂತ್ರ ಯಾರಿಗೋ ತ್ಯಾಗ ಎಂದೆಲ್ಲಾ ಶಾಸ್ತ್ರ ಸಮ್ಮತವಲ್ಲದ ದಾರಿ ಹಿಡಿಯಬಾರದು. ನಮ್ಮ ಇಷ್ಟದೇವರಾದರೂ ಅನುಸಂಧಾನ ಇರಬೇಕೇ ಹೊರತು ಉಚ್ಚಾರವಲ್ಲ. ಮೂರನೆಯದಾಗಿ ಹೋಮಕ್ಕೆ ಬಳಸಿದ ದ್ರವ್ಯಗಳಾವುವೂ ಪಾತ್ರೆಯ ಹೊರಗೆ ಅಥವಾ ಹೋಮಕುಂಡದ ಹೊರಗೆ ಅಥವಾ ಆಹುತಿ ಕೊಡುವವರ ಬಟ್ಟೆಗಳ ಮೇಲೆ ಚೆಲ್ಲಿರಲಿಲ್ಲ. ದೇವತೆಯ ಮೇಲೆ ಎಷ್ಟು ಭಕ್ತಿ ಭಾವ ಇರುವುದೋ ಕೊಡುವ ದ್ರವ್ಯದ ಬಗ್ಗೆಯೂ ಅದೇ ಭಾವ ಇರಬೇಕು. ಮನೆಗೆ ಬಂದ ಅತಿಥಿಗೆ ಬಡಿಸುವಾಗ ಯಾವ ಜಾಗರೂಕತೆ ತೋರುವೆವೋ ಅಥವಾ ಅವರೆದುರಿಗೆ ಎಂತಹ ಸ್ವಚ್ಛತೆ ತೋರಿಸುವೆವೋ ಅದೇ ತರಹದ ಶ್ರದ್ಧೆ ಯಜ್ಞ ಕರ್ಮದಲ್ಲೂ ಅವಶ್ಯಕ. ಕೆಲವು ಕಡೆ ಕುಂಡದ ಹೊರಗೊಂದಷ್ಟು ತುಪ್ಪ, ಪಾತ್ರೆಯ ಸುತ್ತಲೂ ಒಂದಷ್ಟು, ಅಲ್ಲಲ್ಲಿ ಚೆಲ್ಲಿದ ಪಾಯಸ- ಎಳ್ಳು ಮೊದಲಾದವನ್ನು ಕಾಣುತ್ತೇವೆ. ಇಂತಹ ಯಾವ ದೃಶ್ಯವೂ ಆ ಯಜ್ಞದಲ್ಲಿ ಹುಡುಕಿದರೂ ಸಿಗುತ್ತಿರಲಿಲ್ಲ. ಎಲ್ಲಾ ಅಂಗಗಳು ಪೂರ್ಣವಾಗಿ ಅದು ಬ್ರಹ್ಮದಂತೆ ತೋರುತ್ತಿತ್ತು ಎನ್ನುತ್ತಾನೆ ಮಹರ್ಷಿ. ಬ್ರಹ್ಮ ಶಬ್ದದ ಮುಖ್ಯ ಅರ್ಥ ಪೂರ್ಣ ಎಂದು. ಈ ಯಜ್ಞವು ಎಲ್ಲಾ ವಿಧವಾಗಿ ಪೂರ್ಣತೆಯ ಸಾಕಾರವಾಗಿತ್ತು. ಮಂತ್ರಲೋಪ-ಕ್ರಿಯಾಲೋಪಕ್ಕೆ ಅವಕಾಶವಿಲ್ಲದಂತೆ ಲೋಕಕ್ಷೇಮದ ಏಕೈಕ ಪ್ರಧಾನ ಉದ್ದೇಶದಿಂದ ಅಲ್ಲಿ ಆ ಮಹಾಕಾರ್ಯ ನಡೆಯುತ್ತಿತ್ತು._



ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩