ರಾಮಾಯಣ ೧೭೩
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೩🏝📖
*ಪ್ರವರ್ಗ್ಯಂ ಶಾಸ್ತ್ರತಃ ಕೃತ್ವಾ ತಥೈವೋಪಸದಂ ದ್ವಿಜಾಃ | ಚಕ್ರುಶ್ಚ ವಿಧಿವತ್ಸರ್ವಮಧಿಕಂ ಕರ್ಮ ಶಾಸ್ತ್ರತಃ ||*
_ಸಾಂಗ್ರಹಣ ಯಜ್ಞವನ್ನು ಮಾಡಿ ವರ್ಷದ ನಂತರ ಸರಯೂನದಿಯ ಉತ್ತರದ ತೀರದಲ್ಲಿ ದಶರಥನು ಯಜ್ಞವನ್ನು ಆರಂಭಿಸಿದನು. ವೇದದ ಅರ್ಥವನ್ನು ತಿಳಿದ ಋತ್ವಿಜರು ಯಜ್ಞವನ್ನು ಮೀಮಾಂಸಾಶಾಸ್ತ್ರ ಹಾಗೂ ಕಲ್ಪಸೂತ್ರಕ್ಕನುಸಾರವಾಗಿ ಉಪಕ್ರಮಿಸಿದರು.ಇಲ್ಲಿ ಒಮ್ಮೆ ದೀಕ್ಷೆ ಪಡೆದ ಮೇಲೆ ಋತ್ವಿಜರು ಸ್ವೇಚ್ಛೆಯಾಗಿ ತಿರುಗುವಂತಿಲ್ಲ. ಯಜ್ಞಶಾಲೆಯ ಒಳಗೇ ತಿರುಗಬೇಕು, ಇಂತಹ ದಿಕ್ಕಿಗೇ ಕುಳಿತುಕೊಳ್ಳಬೇಕು, ಇಂತಹ ಆಹಾರವನ್ನು ಮಾತ್ರ ಸೇವಿಸಬೇಕು ಮೊದಲಾದ ಅನೇಕ ನಿಯಮಗಳಿವೆ. ಅದರಲ್ಲಿ ಒಂದು ಅಂಗವಾದ ಸೋಮಯಾಗ ಮುಗಿಯುವ ಮೊದಲು ಅಧ್ವರ್ಯುವು ಆ ಮಂಟಪದ ಪಶ್ಚಿಮಭಾಗವನ್ನು ದಾಟಿ ಹೋಗಬಾರದು. ಯಜ್ಞ ಎಂದರೆ ಅನೇಕ ನಿಯಮಗಳ ಒಂದು ಕರ್ಮ. ಹೇಗೆ ಒಂದು ಸಂಸ್ಥೆಗೆ ಸೇರಿದ ಮೇಲೆ ಅಲ್ಲಿಯ ನಿಯಮಗಳಿಗೆ ಬದ್ಧರಾಗಿ ಅಲ್ಲಿಯ ವಾತಾವರಣ ಬಿಟ್ಟು ಬೇರೆ ಕಡೆ ಕೆಲಸದ ವೇಳೆಯಲ್ಲಿ ಹೋಗುವಂತಿಲ್ಲವೋ ಅಂತೆಯೇ ಇಲ್ಲೂ ಅನೇಕ ನಿಯಮಗಳಿವೆ._
_ಋತ್ವಿಜರು ಮೊದಲು ಪ್ರವರ್ಗ್ಯವನ್ನು ನಂತರ ಉಪಸದ ಎಂಬ ಯಾಗವನ್ನು ನಿರ್ವಹಿಸಿದರು. ದೇಸೀ ತಳಿಯ ಗೋವಿನ ಹಾಲನ್ನು ಕಾಯಿಸಿ ಸುಮಾರು ಒಂದು ದೊಡ್ಡ ಲೋಟದಷ್ಟು ಪ್ರಮಾಣದಲ್ಲಿ ಅಶ್ವಿನೀ ದೇವತೆಗಳ ಪ್ರೀತ್ಯರ್ಥವಾಗಿ ಕೊಡುವುದು. ಹೀಗೆ ನೀಡಿದಾಗ ಆಕಾಶದೆತ್ತರಕ್ಕೆ ಅಗ್ನಿ ಏರುತ್ತದೆ. ಬಹಳ ಅನುಭವಿಗಳು ಮಾತ್ರ ಈ ಕರ್ಮ ನಿರ್ವಹಿಸಬಲ್ಲರು. ಸಾಮಾನ್ಯರು ಮಾಡ ಹೊರಟರೆ ಸುಟ್ಟುಹೋದಾರು. ಉಪಸದ ಎಂದರೆ ಯಜ್ಞದಲ್ಲಿ ಕೆಲವೊಮ್ಮೆ ಹಾಲು ಮಾತ್ರ ಕುಡಿದು ದಿನ ಕಳೆಯುವುದು ಅಥವಾ ಸ್ವಲ್ಪ ಮಾತ್ರ ತಿನ್ನಬೇಕು, ಕೆಲವೊಮ್ಮೆ ಉಪವಾಸ ಮಾಡಬೇಕು ಇತ್ಯಾದಿ ನಿಯಮಗಳ ಪಾಲನೆ._
*ಗೀತಿಭಿರ್ಮಧುರೈಃ ಸ್ನಿಗ್ಧೈರ್ಮಂತ್ರಾಹ್ವಾನೈರ್ಯಥಾರ್ಹತಃ | ಹೋತಾರೋ ದದುರಾವಾಹ್ಯ ಹವಿರ್ಭಾಗಾನ್ದಿವೌಕಸಾಮ್||*
_ಯಜ್ಞದ ಹೋತೃಗಳು ಮಧುರವಾದ, ಪ್ರೀತಿಪೂರ್ವಕವಾದ ಋಕ್ಕುಗಳು ಹಾಗೂ ಮಂತ್ರಗಳಿಂದ ದೇವತೆಗಳಿಗೆ ನಿರ್ದೇಶನ ಮಾಡಿದ ರೀತಿಯಲ್ಲಿ ಹವಿರ್ಭಾಗಗಳನ್ನು ಅರ್ಪಿಸಿದರು. ಇಲ್ಲಿ ಮಾಧುರ್ಯ ಹಾಗೂ ಪ್ರೀತಿ ಎರಡೂ ಮುಖ್ಯವಾದದ್ದು. ಕಾಟಾಚಾರಕ್ಕೆ ಕೂಡಿ ದಿನಕ್ಕೈದು ಬಾರಿಯೋ ವಾರಕ್ಕೆ ಒಂದು ಬಾರಿಯೋ ಕೂಗುವ ಮಂತ್ರವಲ್ಲ. ಅರ್ಥವನ್ನು ಸರಿಯಾಗಿ ಅರಿತು ಮಧುರಸ್ವರದಲ್ಲಿ ದೇವತೆ ತನ್ನ ಕಣ್ಣೆದುರಿಗೆ ಬರುವಂತೆ ಪ್ರೀತಿಯಿಂದ ಕರೆಯುವುದು. ಸಾಮಗಾನಗಳಂತೂ ಸಂಗೀತ ಪ್ರಧಾನ. ಕೇಳುಗರ ಮನದಲ್ಲಿ ಶ್ರದ್ಧೆಯನ್ನು ಹುಟ್ಟಿಸುವಂತಹವು. ಹಾಗಾಗಿಯೇ ಸಂಸ್ಕೃತದ ಮಾತು ಉಲ್ಲೇಖನೀಯ-ಒಂದು ಶಬ್ದವನ್ನಾದರೂ ಅರ್ಥವತ್ತಾಗಿ ತಪ್ಪಾಗದಂತೆ ಸರಿಯಾಗಿ ಪ್ರಯೋಗಿಸಿದಾಗ ನೀವು ಬಯಸಿದ್ದು ದೊರಕುತ್ತದೆ ಎಂದು. ಅರ್ಥ ಅರಿಯದೇ ಮಾಡುವ ಪ್ರಯೋಗ ಪಾಯಸದ ಪಾತ್ರೆಯ ಸೌಟಿನಂತೆ.*ದರ್ವೀ ಸೂಪರಸಾನಿವ* ಎನ್ನುತ್ತದೆ ನಿರುಕ್ತ._
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ