ರಾಮಾಯಣ ೧೭೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೫🏝📖   

*ನ ತೇಷ್ವಹಸ್ಸು ಶ್ರಾಂತೋ ವಾ ಕ್ಷುಧಿತೋ ವಾಪಿ ದೃಶ್ಯತೇ | ನಾವಿದ್ವಾಬ್ರಾಹ್ಮಣಸ್ತತ್ರ ನಾಶತಾನುಚರಸ್ತಥಾ || ವೃದ್ಧಾಶ್ಚ ವ್ಯಾಧಿತಾಶ್ಚೈವ ಸ್ತ್ರಿಯೋ ಬಾಲಾಸ್ತಥೈವ ಚ | ಅನಿಶಂ ಭುಂಜಮಾನಾನಾಂ ನ ತೃಪ್ತಿರುಪಲಭ್ಯತೇ ||*


_ರಾಜನ ಯಜ್ಞ ನಡೆಯುತ್ತಿದ್ದ ಸಮಯದಲ್ಲಿ ಹಸಿವು-ಬಾಯಾರಿಕೆಯಿಂದ ಬಳಲುತ್ತಿರುವವರನ್ನು ಕಾಣಲು ಸಾಧ್ಯವಿರಲಿಲ್ಲ. ಎಲ್ಲಿ ನೋಡಿದರಲ್ಲಿ_ *ದೀಯತಾಮನ್ನಂ* _ಎಂದು ಅನ್ನದಾನ ಹೊತ್ತು ಹೊತ್ತಿಗೆ ನಡೆಯುತ್ತಲೇ ಇತ್ತು. ನಾಲ್ಕು ವರ್ಣದವರು ಮಾತ್ರವಲ್ಲದೆ ತಪಸ್ವಿಗಳೂ, ದಿಗಂಬರರೂ, ವ್ಯಾಧಿಪೀಡಿತರೂ, ವೃದ್ಧರೂ, ಬಾಲಕರೂ ಹೀಗೆ ಎಲ್ಲರೂ ಸಾಕಷ್ಟು ಉಂಡೂ ತೃಪ್ತಿಹೊಂದುತ್ತಿರಲಿಲ್ಲ. ಏಕೆಂದರೆ ಇನ್ನೊಂದಷ್ಟು ದಿನ ಈ ಯಜ್ಞದ ಪ್ರಸಾದದ ರುಚಿ ನಾಲಗೆಯಲ್ಲಿ ಇರಲಿ ಎಂಬ ಬಯಕೆಯನ್ನು ಹುಟ್ಟಿಸುವಂತಿತ್ತು ಪಾಕದ ರುಚಿ. ಅಲ್ಲಿನ ಪ್ರಸಾದದ ರುಚಿಯು ಸಾಕು ಎಂಬ ಮಾತನ್ನು ಬರಿಸುತ್ತಲೇ ಇರಲಿಲ್ಲ. ಅಲ್ಲಿ ವಿದ್ವಾಂಸನಲ್ಲದ ಬರೇ ಉಪವೀತಧಾರಣೆಗೆ ಯೋಗ್ಯನೆನಿಸಿದ ಬ್ರಾಹ್ಮಣನು ಒಬ್ಬನೂ ಇರಲಿಲ್ಲ. ಆ ಕಾಲದಲ್ಲಿ ಹುಟ್ಟು ಎನ್ನುವುದು ಒಂದು ನಿಮಿತ್ತ. ಬ್ರಾಹ್ಮಣ ಎಂದು ಕರೆಸಿಕೊಳ್ಳಬೇಕಾದರೆ ಸಾಕಷ್ಟು ವೇದ-ವೇದಾಂಗಗಳ ಅಧ್ಯಯನ ಅವಶ್ಯಕವಾಗುತ್ತಿತ್ತು. ಹಾಗೆ ಮಾಡದಿದ್ದರೆ ಸಮಾಜ ಅಂತಹವರನ್ನು ತಮಾಷೆ ಮಾಡುತ್ತಿತ್ತು ಹಾಗೂ ನಿಂದಿಸುತ್ತಿತ್ತು. ಯಾವೊಂದು ಶಾಸ್ತ್ರೋಕ್ತ ಕರ್ಮ ಮಾಡದೇ ಸುಮ್ಮನೆ ಬ್ರಾಹ್ಮಣ ಎಂದು ತಮ್ಮನ್ನು ತಾವು ಹೇಳಿಕೊಳ್ಳುವ ಈಗಿನ ಅನೇಕರಿಗೆ ಇದೊಂದು ಓದಬೇಕಾದ ಶ್ಲೋಕ. ನೂರಾರು ಶಿಷ್ಯರಿಲ್ಲದ ಆಚಾರ್ಯರು ಒಬ್ಬರೂ ಇರಲಿಲ್ಲ. ಆಚಾರ್ಯ ಎಂದು ಕರೆಸಿಕೊಳ್ಳಬೇಕಾದರೆ ಸಾಕಷ್ಟು ಶಿಷ್ಯರಿಗೆ ತಾನು ಕಲಿತ ವಿದ್ಯೆಯನ್ನು ಬೋಧಿಸಬೇಕಾಗುತ್ತದೆ‌. ಸುಮ್ಮನೆ ತಾನೇ ಒಂದಷ್ಟು ಬಿರುದುಗಳನ್ನು ( ವೇದಬ್ರಹ್ಮ, ಗುರೂಜಿ, ಆಚಾರ್ಯ, ಪಂಡಿತ್ ಇತ್ಯಾದಿ ) ಹಾಕಿಕೊಂಡ ಕೂಡಲೇ ಯೋಗ್ಯತೆ ನಿರ್ಣಯವಾಗುವುದಿಲ್ಲ. ಅಲ್ಲಿಗೆ ಬಂದ ಆಚಾರ್ಯರು ತಮ್ಮ ಜೊತೆಗೆ ನೂರಾರು ಶಿಷ್ಯರನ್ನು ಕರೆದುಕೊಂಡೇ ಬಂದಿದ್ದರು. ಅದೇ ಅವರ ಶ್ರೇಷ್ಠತೆಯನ್ನು ಸಾರುತ್ತಿತ್ತು._ *ವಿವಿಧಾನಿ ವಾಸಾಂಸಿ ದೀಯತಾಮ್* _ಎಂದು ಪದೇ ಪದೇ ಘೋಷಿಸುತ್ತಲೇ ಇದ್ದರು. ಯಜ್ಞ ಪದದ ಧಾತುವಿನ ಅರ್ಥಗಳಲ್ಲಿ ಒಂದು ಅರ್ಥ ದಾನ.ತನ್ನ ಸಂಪತ್ತನ್ನು ಧಾರಾಳವಾಗಿ ಹಂಚಿ ಸಮಾಜದಿಂದ ಪಡೆದದ್ದನ್ನು ಮತ್ತೆ ಕೊಡುವ ಉದಾತ್ತ ಧ್ಯೇಯವನ್ನು ಒಳಗೊಂಡಿದೆ. ರಾಜ ಜನರಿಂದ ಹಾಗೂ ಯುದ್ಧಗಳಲ್ಲಿ ಗಳಿಸಿದ ಬೊಕ್ಕಸ ಮೀತಿದ ಸಂಪತ್ತನ್ನು  ಯಜ್ಞದ ಮೂಲಕ ವಿನಿಯೋಗಿಸುತ್ತಿದ್ದಾನೆ. ಯಜ್ಞ ಎ‌ನ್ನುವುದು ಒಂದು ತೋರಿಕೆಯ ಅಥವಾ ಕಾಟಾಚಾರದ ಅಥವಾ ಒಂದು ವರ್ಗದವರಿಗೆ ತೃಪ್ತಿಪಡಿಸಲು ಹಮ್ಮಿಕೊಂಡ ಜಾತೀಯ ಸಂಘಟನೆ ಸಮ್ಮೇಳನವಲ್ಲ. ಅದು ಸರ್ವರಿಗೂ ಸಮಪಾಲು ಸರ್ವರೂ ಸುಖಿ ಎಂಬ ಉನ್ನತ ಧ್ಯೇಯ ಹೊಂದಿರುವ ಅದ್ಭುತ ಕಾರ್ಯ. ದಶರಥನ ಯಜ್ಞದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಅಲ್ಲಿಯ ಅನ್ನದ ರುಚಿಯನ್ನು ಬಹುದಿನಗಳವರೆಗೆ ವರ್ಣಿಸುತ್ತಿದ್ದರು. ಅತೃಪ್ತಿ ಎನ್ನುವ ಪದ ಅಲ್ಲಿ ಕೇಳಲೂ ಸಾಧ್ಯವಿರಲಿಲ್ಲ._
 



ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩