🌹 ಮೇಘದೂತದ ಒಂದು ಹನಿ🌹

*आपृच्छस्व प्रियसखममुं तुङ्गमालिङ्यशैलं वन्द्यै: पुंसां रघुपतिपदैरङ्कितं मेखलासु । काले काले भवति भवतो यस्य संयोगमेत्य स्नेहव्यक्तिश्चिरविरहजं मुञ्चतो बाष्पमुष्णम् ।।*


_ಯಕ್ಷನು ಮುಂದುವರೆಸುತ್ತಿದ್ದಾನೆ ತನ್ನ ಮಾತುಗಳನ್ನು, ಎಲೈ ಮೇಘವೇ, ನೀನು ಹೋಗುವ ದಾರಿಯಲ್ಲಿ ನಿನ್ನ ಪ್ರಿಯಮಿತ್ರನಾದ ಉನ್ನತವಾದ ತಪ್ಪಲು ಪ್ರದೇಶಗಳುಳ್ಳ, ಅಷ್ಟಲ್ಲದೇ ಜೀವಿಗಳಿಗೆ ಪವಿತ್ರವೆನಿಸಿ ಅವರಿಂದ ಆರಾಧಿಸಲ್ಪಡುವ ಅಥವಾ ಗೌರವಿಸಲ್ಪಡುವ ಶ್ರೀರಾಮನ ಹೆಜ್ಜೆ ಗುರುತುಗಳನ್ನು ಈ ತಪ್ಪಲು ಪ್ರದೇಶದಲ್ಲಿ ಹೊಂದಿರುವ ಈ ಚಿತ್ರಕೂಟ ಪರ್ವತವನ್ನು ಮನಸಾರೆ ಅಪ್ಪಿಕೊಂಡು ಮಧುರ ಮಾತುಗಳಿಂದ ಅವನ ಒಪ್ಪಿಗೆ ಪಡೆದು ಮುಂದುವರೆ. ಬಹುಕಾಲದ ನಂತರದ ಮಿತ್ರನ ಸಂಪರ್ಕವು ಅವನಲ್ಲಿ ಆನಂದ ಬಾಷ್ಪವನ್ನು ಹೊರಸೂಸುವಂತೆ ಮಾಡುವುದು. ಪ್ರತಿ ಮಳೆಗಾಲದಲ್ಲಿ ಈ ಮೋಡ ಬರುವುದೆಂಬ ನಿಶ್ಚಯವಿದ್ದರೂ ಅಷ್ಟು ದಿನ ಕಾಪಿಟ್ಟುಕೊಂಡ ಸ್ನೇಹದ ಭಾವವನ್ನು ನೆನೆದು ಮತ್ತೆ ಯಾವಾಗ ಈ ಸಮಾಗಮವು ನಡೆಯುವುದೆಂದು ಚಿಂತಿಸುತ್ತಾ ಬಿಸಿ ಕಣ್ಣೀರನ್ನು ಸುರಿಸುತ್ತಾ ನಿಟ್ಟುಸಿರು ಬಿಡುವುದರ ಮೂಲಕ ನಿನ್ನ ಮೇಲಿನ ಪ್ರೇಮಾತಿಶಯವನ್ನು ಸಾರುವನು ಆ ಪರ್ವತಶ್ರೇಷ್ಠ. ಮೊದಲ ಮಳೆಗೆ ಭೂಮಿ ತೋಯ್ದು ಒಳಗಿದ್ದ ಉಷ್ಣವೆಲ್ಲ ಹೊರಬರುತ್ತದೆ ಹೊಗೆಯ ಮೂಲಕ. ಜಲ್ಲಿಕಲ್ಲುಗಳ ಮೇಲೆ ಮಳೆ ಹನಿ ಬಿದ್ದಾಗ ಹೊರಹೊಮ್ಮುವ ಹೊಗೆಯನ್ನು ಗಮನಿಸಬಹುದು. ಇದು ಮೊದಲೇ ಪರ್ವತ. ಶಿಲೆಗಳು ಬಹುವಾಗಿವೆ. ಮೋಡ ಬಂದು ಮಳೆ ಸುರಿಸಿದ ಹಾಗೆ ತಂಪಾದ ಕಲ್ಲಿನ ಮೇಲ್ಮೈಯಲ್ಲಿ ಧೂಮ ಹಾಗೂ ಜಲ ಏಕಕಾಲದಲ್ಲಿ ಹೊರಡುತ್ತವೆ. ಅದನ್ನೇ ಕವಿ ಬಿಸಿಯಾದ ಕಣ್ಣೀರಿಗೆ ಹೋಲಿಸಿದ್ದಾನೆ. ಹೊಗೆಯನ್ನು ಬೇಕಾದರೆ ನಿಟ್ಟುಸಿರು ಎನ್ನಬಹುದು. ಮೋಡ ತನ್ನ ಮಾರ್ಗದಲ್ಲಿ ಮುಂದುವರೆಯುತ್ತಾ ಚಿತ್ರಕೂಟ ಪರ್ವತದೆಡೆಗೆ ಬರುವುದು. ಅದಕ್ಕೂ ಆ ಶೈಲಕ್ಕೂ ಬಹುಕಾಲದ ಗೆಳೆತನ. ಹಾಗಾಗಿ ಗೆಳೆಯನನ್ನು ಭೇಟಿ ಮಾಡದೇ ಹೋಗುವಂತಿಲ್ಲ. ಆ ಗೆಳೆಯನಾದರೋ ಇವನ ಅಗಮನದಿಂದ ಮನತುಂಬಿ ಬಂದು ಆತ್ಮೀಯವಾಗಿ ಸತ್ಕರಿಸಿ ಮಧುರ ಮಾತುಗಳಿಂದ ಬೀಳ್ಕೊಡುವನು. ಅವನ ಸ್ನೇಹದ ಅಭಿವ್ಯಕ್ತಿಯಾಗುವುದು ಬಿಸಿಯುಸಿರಿನ ಮೂಲಕ. ಆ ಪ್ರದೇಶ ರಾಮಪಾದಸ್ಪರ್ಶದಿಂದ ಧನ್ಯವಾದುದೂ ಹೌದು. ನರರಿಂದ ಪೂಜಿಸಲ್ಪಡುವ ಪವಿತ್ರ ಸ್ಥಳವದು. ಹಾಗಾಗಿ ಸ್ನೇಹಿತನ ಮಿಲನ ಹಾಗೂ ಪವಿತ್ರ ಪ್ರದೇಶದ ಸಂದರ್ಶನ ಈ ಎರಡೂ ದೃಷ್ಟಿಯಲ್ಲಿ ನೀನು ಆ ಮಾರ್ಗದಲ್ಲೇ ಹೋಗು ಎಂದು ಅಭಿಪ್ರಾಯ. ನಾವೂ ಕೆಲವೊಮ್ಮೆ ಆಪ್ತ ಮಿತ್ರರು ಸಿಕ್ಕಿದರೂ ಭೇಟಿಯಾಗದೇ ಅಥವಾ ಅವರ ಮನೆಗೆ ಹೋಗದೆ ಹಾಗೆಯೇ ಮುಂದೆ ತೆರಳುವುದುಂಟು. ಅದು ಅವರ ಬೇಸರಕ್ಕೆ ಕಾರಣವಾಗಬಹುದು. ಆತ್ಮೀಯರು ಸಿಕ್ಕಿದಾಗಲೆಲ್ಲ ಭೇಟಿಯಾಗಿ ಒಂದೆರಡು ಆಪ್ತ ವಚನಗಳನ್ನು ನುಡಿದು ಮುನ್ನಡೆಯೋಣ. ಪವಿತ್ರ ಪ್ರದೇಶಗಳಿಗೆ ಭೇಟಿ ನೀಡಿ ನಾವೂ ಪವಿತ್ರರಾಗೋಣ. ಬಹಳ ಕಾಲದ ವಿರಹದಿಂದಾಗಿ  ಉಷ್ಣ ಬಾಷ್ಪ ಬಿಡುವ ಮೂಲಕ ಸ್ನೇಹವ್ಯಕ್ತಿ ತೋರಲ್ಪಡುತ್ತದೆ ಎನ್ನುವುದು ಭಾವ._

📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩