📙 ವೇದ-ಧರ್ಮ ಭಾಗ-೮

*ಕೃಷ್ಣ ಯಜುರ್ವೇದ ಸಂಹಿತೆ*

_ಇದರಲ್ಲಿ ೭ ಕಾಂಡಗಳು, ೪೪ ಪ್ರಪಾಠಕಗಳು, ೬೩೧ ಅನುವಾಕಗಳು ಇವೆ. ಹೆಸರಿಗೆ ತಕ್ಕಂತೆ ಕೆಲವೆಡೆ ಗದ್ಯ ಕೆಲವೆಡೆ ಪದ್ಯ.( ಕೃಷ್ಣ=ಮಿಶ್ರಿತ) ವೈಶಂಪಾಯನರು ತಮ್ಮ ಶಿಷ್ಯರಿಗೆ ಯಾಜ್ಞವಲ್ಕ್ಯರು ವಮನ ಮಾಡಿದ್ದನ್ನು ತಿತ್ತಿರಿ ರೂಪದಲ್ಲಿ ಭಕ್ಷಿಸುವಂತೆ ಆದೇಶಿಸಿದ
ರು. ಹಾಗಾಗಿ ಇದು ತೈತ್ತಿರೀಯ ಸಂಹಿತೆ.ಇದು ಒಂದು  ಕಥೆ ಸಂಕೇತರೂಪದ್ದು.  ಅಧ್ಯಯನಕ್ಕೆ ಯೋಗ್ಯತೆ ಪಡೆಯುವುದು ಮನಸ್ಸನ್ನು ಹಕ್ಕಿಯಂತೆ ಏಕಾಗ್ರತೆಯಿಂದ ಹಾರುವುದನ್ನು ಕಲಿತಾಗ ಮಾತ್ರ. ಏಕಾಗ್ರತೆ ಹೆಚ್ಚಿದಷ್ಟು ಬಹುಕಾಲ ಹಾರಾಟ ಬಹುದೂರ ಹಾರಾಟ ಸಾಧ್ಯ._

_ಮೈತ್ರಾಯಣೀ ಸಂಹಿತೆಯಲ್ಲಿ ೪ ಕಾಂಡಗಳು, ೫೪ ಪ್ರಪಾಠಕಗಳು, ೨೧೪೪ ಮಂತ್ರಗಳು ಇವೆ. ಮಿತ್ರಾಯಣ ಋಷಿಗಳ ಪರಂಪರೆಯಿಂದ, ಅಥವಾ ಆ ಗೋತ್ರದವರಿಂದ ಸಾಕ್ಷಾತ್ಕರಿಸಲ್ಪಟ್ಟ ಮಂತ್ರಗಳ ಗುಂಪು ಎಂದಿರಬಹುದೇನೋ ಆ ಹೆಸರು.
ಕೃಷ್ಣ ಹಾಗೂ ಶುಕ್ಲ ಯಜುರ್ವೇದ ಸಂಹಿತೆಗಳು ವಿಷಯನಿರೂಪಣೆಯಲ್ಲಿ ಭಾಗಶ: ಏಕತೆಯನ್ನು ಹೊಂದಿವೆ. ಯಜುರ್ವೇದದ ೮೫ ಶಾಖೆಗಳಲ್ಲಿ ಈಗ ಕೇವಲ ೪ ಕಾಣಸಿಗುತ್ತವೆ. ಕಠ ಸಂಹಿತೆಯಲ್ಲಿ ೫ ಕಾಂಡಗಳು, ೪೦ ಸ್ಥಾನಕಗಳು, ೧೩ ಅನುವಾಚನಗಳೂ, ೮೪೩ ಅನುವಾಕಗಳೂ, ೩೦೯೧ ಮಂತ್ರಗಳೂ ಇವೆ. ಇನ್ನೊಂದು ಸಂಹಿತೆ ಕಪಿಷ್ಠಲ. ಅದು ಭಾಗಶ: ಲಭ್ಯವಿದೆಯಷ್ಟೇ._

*ಸಾಮವೇದ ಸಂಹಿತೆ*

_ಸಾಮಸಂಹಿತೆಯಲ್ಲಿ ಸೋಮಲತೆಯ ವರ್ಣನೆ ವರ್ಣನೆ ಹೆಚ್ಚಿದೆ‌. ಸೋಮದಿಂದ ರಸವನ್ನು ತೆಗೆಯುವ ಸಂದರ್ಭದಲ್ಲಿ ಸಾಮಗಾನ ಮಾಡಲಾಗುವುದು. ಈ ವೇದದ ಮುಖ್ಯ ವಿಷಯ ಸಂಗೀತ. ದುಂದುಭಿ, ವೀಣೆ, ವೇಣು ಮುಂತಾದ ವಾದ್ಯಗಳ ವರ್ಣನೆಯೂ ಇಲ್ಲಿ ಕಂಡುಬರುವುದು. ಹಾಗಾಗಿಯೇ ಇದು ಸಂಗೀತಶಾಸ್ತ್ರದ ಜನಕವೆಂದು ಕರೆಸಲ್ಪಟ್ಟಿದೆ. ಇದರಲ್ಲಿ ಎರಡು ವಿಭಾಗಗಳಿವೆ. ಅರ್ಚಿಕ ಹಾಗೂ ಗಾನ. ಅರ್ಚಿಕವೆಂದರೆ ಋಕ್ಕುಗಳ ಸಮೂಹ.ಇದು ಮತ್ತೆ ಎರಡಾಗಿದೆ. ಪೂರ್ವಾರ್ಚಿಕ ಮತ್ತು ಉತ್ತರಾರ್ಚಿಕ. ಪೂರ್ವಾರ್ಚಿಕದಲ್ಲಿ ೬ ಪ್ರಪಾಠಕಗಳೂ , ಉತ್ತರಾರ್ಚಿಕದಲ್ಲಿ ೯ ಪ್ರಪಾಠಕಗಳೂ ಇವೆ. ಒಂದು ಪ್ರಪಾಠಕದಲ್ಲಿ ೨ ಅರ್ಥಗಳು ಅಥವಾ ಖಂಡಗಳು ಇವೆ. ಖಂಡಗಳು ಮುಂದೆ ದಶತಿಯಲ್ಲಿ ವಿಭಾಗವಾಗಿಸಿ. ದಶತಿಯನ್ನು ಋಕ್ಕುಗಳಾಗಿ ವಿಭಾಗಿಸಲಾಗಿದೆ. ಇಂತಹ ವಿಚಿತ್ರವಾದ ವಿಭಾಗದಿಂದಲೇ ನಮಗೆ ಸಾಮವೇದದ ಪಠನ ಸುಲಭವಾಗಿ ಏನೆಂದೇ ತಿಳಿಯುವುದಿಲ್ಲ. ಏನನ್ನೋ ಗುನುಗುನಿಸುತ್ತಿದ್ದಾರೆ ಎಂದೂ ಅನಿಸಬಹುದು. ಸಂಗೀತದ ಸಾವಿರಾರು ರಾಗಗಳು, ತಾಳಗಳು ಇಲ್ಲಿ ಬೇರೆ ಬೇರೆ ಗಾನಗಳ ರೂಪದಲ್ಲಿ ಅಡಕವಾಗಿವೆ. ಮೊದಲಿಗೆ ಸಾಮವೇದ ಕಲಿಸಿ ಅನಂತರ ಸಂಗೀತ ಕಲಿತರೆ ಬಲು ಸುಲಭವಾದೀತು ಅರ್ಥೈಸಿಕೊಳ್ಳಲು. ಇಲ್ಲಿ ಮೊದಲನೆಯ ಪ್ರಪಾಠಕವನ್ನು *ಆಗ್ನೇಯಕಾಂಡ*ವೆಂದು ಕರೆದಿದ್ದಾರೆ. ಇದರಲ್ಲಿ ಅಗ್ನಿಗೆ ಸಂಬಂಧಿಸಿದ ತುಂಬಾ ಋಕ್ಕುಗಳಿವೆ. ಋಗ್ವೇದದ ಸಾಕಷ್ಟು ಮಂತ್ರಗಳು ಈ ವೇದದಲ್ಲಿ ಕಂಡುಬರುವವು. ಆದರೆ ಸ್ವರ ಹಾಗೂ ಉಚ್ಚಾರಣೆಯಲ್ಲಿ ಸಾಕಷ್ಟು ಭಿನ್ನತೆಯಿದೆ. ೨ ಹಾಗೂ ೪ ನೆಯ ಪ್ರಪಾಠಕಗಳಲ್ಲಿ ಇಂದ್ರನ ಸ್ತುತಿ ಇರುವ ಕಾರಣ *ಐಂದ್ರಪರ್ವ* ಎಂದು ಕರೆದಿದ್ದಾರೆ. ೫ ನೆಯ ಪ್ರಪಾಠಕ *ಪವಮಾನ ಪರ್ವ*. ಇದರಲ್ಲಿ ಸೋಮನಿಗೆ ಸಂಬಂಧಿಸಿದ ಮಂತ್ರಗಳಿವೆ. ೬ ನೆಯ ಪ್ರಪಾಠಕವನ್ನು *ಆರಣ್ಯಕ* ಪರ್ವವೆಂದಿದ್ದಾರೆ. ಋಷಿಗಳು ಯಾರು, ಅವರ ಕರ್ಮ, ಲಕ್ಷಣ , ಸಾಧನೆ ಇತ್ಯಾದಿ ಅರಣ್ಯದಲ್ಲಿ ವಾಸಿಸುತ್ತಾ ಲೋಕಕಲ್ಯಾಣ ಮಾಡುವವರ ವಿಷಯ ಇಲ್ಲಿ ನಿರೂಪಿತವಾಗಿದೆ. ದೇವತೆಗಳು- ಛಂದಸ್ಸುಗಳು ಭಿನ್ನವಾಗಿದ್ದರೂ ಗಾನದಲ್ಲಿ ಏಕರೂಪತೆಯಿದೆ. ಮುಂದಿನ ೫ ಪ್ರಪಾಠಕಗಳನ್ನು *ಗ್ರಾಮಗಾನ* ಎಂದಿದ್ದಾರೆ. ಪೂರ್ವಾರ್ಚಿಕದಲ್ಲಿ ಒಟ್ಟು ೬೫೦ ಮಂತ್ರಗಳಿವೆ. ಗ್ರಾಮದ ವಿವಿಧ ಜನರ ವೃತ್ತಿ, ವರ್ತನೆ ಮುಂತಾದವೇ ಇಲ್ಲಿ ಪ್ರಮುಖ ವಿಷಯ. ಉತ್ತರಾರ್ಚಿಕದಲ್ಲಿ ೧೨೨೫ ಮಂತ್ರಗಳಿವೆ. *ಸಹಸ್ರವರ್ತ್ಮಾ ಸಾಮವೇದ:* ಎಂಬಂತೆ ಸಾವಿರ ಶಾಖೆಗಳಿದ್ದ ಈ ವೇದವು ಈಗ ೧೩ ಮಾತ್ರ ಉಳಿಸಿಕೊಂಡಿದೆ. ಇದರಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಶಾಖೆಗಳು ಕೌಥುಮೀಯ ಹಾಗೂ ಜೈಮಿನೀಯ. ಕೌಥುಮ ಹಾಗೂ ಜೈಮಿನಿ ಮಹರ್ಷಿಯಿಂದ ಪ್ರಚಲಿತವಾದವುಗಳು._

📃 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩