ಪದಶಕ್ತಿ ೨೮
🏹*ಪದಶಕ್ತಿ* ---೨೮🌄
*ನಾರದ*
_ನಾರಂ ಪರಮಾತ್ಮವಿಷಯಕಂ ಜ್ಞಾನಂ ದದಾತಿ ಇತಿ ನಾರದಃ ಎಂಬಂತೆ ಭಗವಂತನ ಸ್ವರೂಪವನ್ನು ತಿಳಿಸಿಕೊಡುವ ಜ್ಞಾನಿ ನಾರದ. ನಾರಂ ಎಂದರೆ ಜನರ ಗುಂಪು ಇದನ್ನು ದ್ಯತಿ ಅಂದರೆ ಒಡೆಯುತ್ತಾನೆ ಜಗಳಗಳ ಮೂಲಕ ಎಂಬ ಅರ್ಥದಲ್ಲಿ ನಾರದ ಪದ. ನಾರಂ ಅಂದರೆ ನೀರು ಪಿತೃಗಳಿಗೆ ನೀರನ್ನು ಕರುಣಿಸುತ್ತಾನೆ ಎಂಬ ಅರ್ಥದಲ್ಲಿ ನಾರದ.ನಾರದ ಮಾಡುವ ದೇವರ ಸ್ತುತಿಯಿಂದ ಪಿತೃಗಳ ಬಾಯಾರಿಕೆ ತಣಿಯುವುದು. ನುಃ ಇದಂ ನಾರಂ ಅಂದರೆ ಅಜ್ಞಾನ ತದವ್ಯತಿ ಅಂದರೆ ಜ್ಞಾನ ಉಪದೇಶದ ಮೂಲಕ ಕಳೆಯುವನು ಎಂಬ ಅರ್ಥದಲ್ಲಿ ನಾರದ.ಹೀಗೆ ನಾರದರ ಪಾತ್ರ ಬಹೂಪಕಾರಿ ಏಕಪಾತ್ರ._
_ಬ್ರಹ್ಮನ ಶಾಪದಿಂದ ಉಪಬರ್ಹಣ ಎಂಬ ಗಂಧರ್ವನಲ್ಲಿ ಜನಿಸಿದ ಮಹನೀಯ ನಾರದ. ಅನಂತರ ಮತ್ತೆ ಋಷಿವೀರ್ಯದಿಂದ ಶೂದ್ರಸ್ತ್ರೀಯಲ್ಲಿ ಜನಿಸಿದ ಮಹಾತ್ಮ. ಜನ್ಮದಿಂದಲೇ ಜ್ಞಾನವನ್ನು ಅಂದರೆ ನಾರವನ್ನು ತನ್ನ ಮಾತಾಪಿತೃಗಳಿಗೆ ಕೊಟ್ಟ ಕಾರಣ ನಾರದ ಎಂದು ಹೆಸರಿಸಿದರು. ಹೀಗೆ ನಾರದರ ಕಥೆ ವಿಶಿಷ್ಟವಾದುದು._
_ಪ್ರಜಾಪತಿಗಳಲ್ಲಿ ಒಬ್ಬನ ಹೆಸರು ನಾರದ. ಗಂಧರ್ವರಲ್ಲಿ ಒಬ್ಬನು ನಾರದ. ಶಾಕ್ಯದ್ವೀಪದ ಒಂದು ಪರ್ವತದ ಹೆಸರು ನಾರದ. ವಿಶ್ವಾಮಿತ್ರರ ಮಕ್ಕಳನ್ನು ಹೆಸರಿಸುವಾಗ ಮಹಾಭಾರತ ನಾರದ ಎನ್ನುವ ಹೆಸರನ್ನು ಉಲ್ಲೇಖಿಸುತ್ತದೆ. ಇವರೆಲ್ಲರೂ ಅದೇ ನಾರದರೇ ಬೇರೆಯವರೇ ಎಂಬ ಬಗೆಗೆ ಸಂಶಯವಿದೆ. ಬಹುಶಃ ನಾರದರ ನಾನಾ ಜನ್ಮಗಳಿರಬಹುದು._
ಕನ್ನಡ ಸಂಸ್ಕೃತ ಸಾಹಿತ್ಯದ ಎಲ್ಲೆಡೆ ಇವರ ಉಲ್ಲೇಖ ಕಾಣಬಹುದು.
~ದಾಮಪದಸರೀ ಎಂದು ಧ್ವನಿಯಿಂದ ತುಂಬುರು ನಾರದರು ಗಾನವ ಪಾಡಲು ನಂದಿಯು ಮದ್ದಳೆ ಚೆಂದದಿ ಹಾಕಲು ||ಆಡಿದನೋ ರಂಗ~
ಈ ಕೀರ್ತನೆಯಲ್ಲಿ ಪುರಂದರ ದಾಸರು ನಾರದ ತುಂಬುರರು ದೇವನನ್ನು ಸ್ತುತಿಸುತ್ತಿರಲು ಕೃಷ್ಣ ಕುಣಿದಾಡಿದ ಎಂದು ನಾರದರ ಸ್ತುತಿಯ ಮಹತ್ವ ಸಾರಿದ್ದಾರೆ.
*ನಾರದೇನೈಷ ಸಂಪೃಷ್ಟೋ ಭಗವಾನ್ ಕಮಲೇಕ್ಷಣ:*
ನಾರದರು ಲೋಕಕಲ್ಯಾಣಕ್ಕಾಗಿ ವೈಕುಂಠ ವಾಸಿ ನಾರಾಯಣನ ಬಳಿ ವ್ರತವನ್ನು ಉಪದೇಶಿಸಲು ಕೇಳಿಕೊಳ್ಳುವ ಈ ಮಾತು ಸ್ಕಂದಪುರಾಣದ್ದು.
ತನ್ನ ಹಿತ ಮರೆತು ಲೋಕ ಹಿತ ಬಯಸುವ ಬುದ್ಧಿ ನಮ್ಮಲ್ಲಿ ಮೂಡಿದಾಗ ಭಗವಂತನ ಅನುಗ್ರಹ ತಾನಾಗೇ ಸಿಗುವುದೆಂಬುದಕ್ಕೆ ನಾರದರು ಉತ್ತಮ ಉದಾಹರಣೆ.
ಬಂಜೆಯೆಂದು ಲೋಕನಿಂದತಳಾದ ಸ್ತ್ರೀ ಋಷಿಯ ಅನುಗ್ರಹದಿಂದ ನಾರದರಂತಹ ಪುತ್ರನನ್ನು ಪತಿಯ ಅನುಮತಿ ಪಡೆದೇ ಹೊಂದಿದ್ದು ಲೋಕಸಂಬಂಧ ಮೀರಿದ ಘಟನೆ. ಯಾವ ಜಾತಿಯಲ್ಲಿ ಹೇಗೆ ಹುಟ್ಟಿರಲಿ ಸಾಧಿಸುವ ಛಲವಿದ್ದಲ್ಲಿ ಎಷ್ಟು ಎತ್ತರ ಬೇಕಾದರೂ ಏರಬಹುದೆಂದು ಲೋಕಕ್ಕೆ ಜಾತಿ ಮತ ಲಿಂಗ ಆಶ್ರಯಿಸದೇ ನಿನ್ನ ಗುರಿಯನ್ನು ಆಶ್ರಯಿಸು ಎತ್ತರೆತ್ತರ ಬೆಳೆಯಬಹುದೆಂದು ಸಾಧಿಸಿ ತೋರಿದವರು ನಾರದರು. ಮೇಲು ಕೀಳು ಮೀಸಲಾತಿ ಜಂಜಾಟಕ್ಕೆ ಕೊನೆಹಾಡುವ ಮಾರ್ಗ ನಾರದರ ಭಕ್ತಿ ಮಾರ್ಗ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗಾಗಿ ಒಮ್ಮೆ ಇಣುಕಿ-
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ