ಚಾರುದತ್ತ ೧೬
👳♀ಚಾರುದತ್ತ ಬೆಳಕು- ೧೬👳♀
*लुब्धोर्थवान् साधुजनावमानी वणिक् स्ववृत्तावतिकर्कशश्च। यस्तस्य गेहं यदि नाम लप्स्ये भवामि दु:खोपहतो न चित्ते।।*
_ಕಳ್ಳನು ವ್ಯಾಪಾರಿ ನಾಯಕ ಚಾರುದತ್ತನ ಮನೆಗೆ ನುಗ್ಗಿದ್ದಾನೆ. ಯಾರ ಮನೆ ಕಳ್ಳತನಕ್ಕೆ ಯೋಗ್ಯ ಎಂಬುದನ್ನು ಕವಿ ಅವನ ಮೂಲಕ ಹೇಳಿಸುತ್ತಿದ್ದಾನೆ. ಮೊದಲ ಮನೆ ಲೋಭಿಯದ್ದು. ದುಡ್ಡಿದ್ದೂ ತಾನೂ ತಿನ್ನದೇ ಇತರರಿಗೂ ದಾನ ಮಾಡದೇ ಕೂಡಿಡುವ ಹಾಗೂ ಇನ್ನಷ್ಟು ಬೇಕೆಂದು ಹಂಬಲಿಸುವ ಲೋಭಿಯ ಮನೆಯಲ್ಲಿ ಕಳ್ಳತನ ಮಾಡಬಹುದು. ಎರಡನೇ ವ್ಯಕ್ತಿ ಧನಿಕ. ಸಮಾಜದ ಹೆಚ್ಚಿನ ಜನರ ಒಟ್ಟು ಸಂಪತ್ತಿಗಿಂತ ಹೆಚ್ಚು ಸಂಪತ್ತು ಹೊಂದಿದವನ ಮನೆಯಲ್ಲಿ ಕಳ್ಳತನ ಮಾಡಬಹುದು. ಅವನಿಗೆ ಹೆಚ್ಚು ನಷ್ಟವಾಗದು ಹಾಗೂ ತಿನ್ನಲು ಗತಿಯಿಲ್ಲದ ಪರಿಸ್ಥಿತಿ ಕಳ್ಳತನದಿಂದಾಗಿ ಬರದು. ಸಾಮಾಜಿಕ ವ್ಯವಸ್ಥೆಗೆ ಇದರಿಂದೇನೂ ಭಂಗ ಉಂಟಾಗದು. ವಿತ್ತ ಸಂಚಯವು ಪಾಪ ಎನ್ನುತ್ತದೆ ಧರ್ಮಶಾಸ್ತ್ರ. ಮೂರನೆಯ ವ್ಯಕ್ತಿ ಸಾಧುಜನಾವಮಾನೀ. ಸಜ್ಜನರನ್ನು ನಿಂದಿಸುವುದು, ಪೀಡಿಸುವುದು, ಸುಖಾಸುಮ್ಮನೆ ಅವರೊಡನೆ ಜಗಳ ಕಾದು ಅವರ ಗೌರವಕ್ಕೆ ಧಕ್ಕೆ ತರುವ ವ್ಯಕ್ತಿಯ ಮನೆಯಲ್ಲಿ ಧಾರಾಳವಾಗಿ ಕದಿಯಬಹುದು. ಏಕೆಂದರೆ ಇಂತಹವರು ಅತ್ಯಂತ ಪಾಪಿಷ್ಠರು, ಶಠರೂ, ಮದವೇರಿದವರೂ ಆಗಿರುತ್ತಾರೆ. ಅವರಿಗೆ ಸ್ವಲ್ಪಮಟ್ಟಿಗೆ ಆದರೂ ಒಳ್ಳೆಯ ಬುದ್ಧಿ ಇಂತಹ ಘಟನೆಯಿಂದ ಬರಬಹುದು. ಇನ್ನು ನಾಲ್ಕನೇ ವ್ಯಕ್ತಿ ವ್ಯಾಪಾರಿ. ವ್ಯಾಪಾರ ಅಂದರೆ ಒಂದು ವಸ್ತುವಿನ ಬೆಲೆ ಹೆಚ್ಚು ತೋರಿಸಿ ಮಾರಿ ತಾನು ಶ್ರೀಮಂತನಾಗುವ ದಲ್ಲಾಳಿ ಕೆಲಸ. ಇಂತಹವರು ಅಪಾರ ಧನದ ಸಂಗ್ರಹ ಹೊಂದಿರುವ ಕಾರಣ ಅವರ ಜೀವನಕ್ಕೂ ಇದು ಹಾನಿ ಮಾಡದು. ಇಲ್ಲಿ ಉದಾಹರಿಸಿದ ವ್ಯಾಪಾರಿ ದೊಡ್ಡ ಮಟ್ಟದ ವ್ಯಾಪಾರ ಹೊಂದಿರುವವರ ಬಗೆಗೇ ಹೊರತು ಸಣ್ಣ ಸಣ್ಣ ವ್ಯಾಪಾರಿಗಳ ಬಗೆಗಲ್ಲ. ಕೊನೆಯದಾಗಿ ತನ್ನ ವೃತ್ತಿಯಲ್ಲಿ ಎಂದಿಗೂ ಕರುಣೆ ತೋರದ ವ್ಯಕ್ತಿಯ ಮನೆಯಲ್ಲಿ ಕದಿಯಬಹುದು. ಪರರ ಪರಿಸ್ಥಿತಿ ಅರಿಯದ, ತನ್ನ ಕ್ಷೇಮವೇ ಮುಖ್ಯವಾಗಿರುವ ವ್ಯಕ್ತಿಯ ಬಗೆಗೆ ಕಳ್ಳನಾದರೂ ಏಕೆ ಅನುಕಂಪ ತೋರಬೇಕು! ಸಣ್ಣ ತಪ್ಪಿಗೂ ದೊಡ್ಡದಾಗಿ ಕಿರುಚುವ, ಕೈಕೆಳಗಿನ ಸೇವಕರಿಗೆ ಅಪಾಯ ಸ್ಥಿತಿಯಲ್ಲೂ ರಜೆ ಕೊಡದೆ ಹಿಂಸಿಸುವ, ಜೊತೆಗಿರುವವರ ಯೋಗಕ್ಷೇಮದ ಬಗ್ಗೆ ಯೋಚನೆಯೂ ಮಾಡದ ಕ್ರೂರಿ ಅಥವಾ ಸ್ವಾರ್ಥಿ ಮನುಷ್ಯನ ಮನೆಯ ಕಳ್ಳತನ ಹೆಚ್ಚೇನೂ ಪಾಪ ತರದು. ಇವಿಷ್ಟು ಜನರ ಮನೆಗೆ ಹೋದಾಗ ನನಗೆ ಎನೂ ದುಃಖವಾಗದು. ಅದೇ ಈ ಜನರನ್ನು ಬಿಟ್ಟು ಬೇರೆಯವರ ಮನೆಗೆ ಕಳ್ಳತನಕ್ಕೆ ಹೊರಟಾಗ ನನ್ನ ವೃತ್ತಿ ಅದೇ ಆಗಿದ್ದರೂ ಮನದಲ್ಲಿ ದುಃಖವಾಗುತ್ತದೆ. ಕವಿ ಈ ಮಾತಿನ ಮೂಲಕ ನಮ್ಮ ವ್ಯಕ್ತಿತ್ವ ಹೇಗಿರಬೇಕು ಎಂಬುದನ್ನು ಹೇಳುತ್ತಿದ್ದಾನೆ. ಪರರಿಗೆ ಉಪಕಾರಿಯಾಗಿ, ಹೆಚ್ಚು ದುಡ್ಡು ಸಂಗ್ರಹಿಸುವ ಆಸೆಯ ಬುದ್ಧಿ ಹೊಂದದೇ, ಸಜ್ಜನರ ನಿಂದೆ ಮಾಡದೇ, ತನ್ನ ವೃತ್ತಿಯಲ್ಲಿ ನಿಷ್ಠೆಯ ಜೊತೆಗೆ ಮೃದುತ್ವ ಹಾಗೂ ಕರುಣೆ ಅಳವಡಿಸಿಕೊಂಡು ಬದುಕು ನಡೆಸಿದಾಗ ಕಳ್ಳನೂ ನಮ್ಮ ಬಗೆಗೆ ಗೌರವ ತಾಳುತ್ತಾನೆ. ಇಲ್ಲದಿದ್ದರೆ ಅಪರಾಧಿಗಳೂ ನಮ್ಮನ್ನು ತಿರಸ್ಕಾರಿಸುವ ಮಟ್ಟಿಗೆ ನಮ್ಮ ವ್ಯಕ್ತಿತ್ವ ಕುಗ್ಗುತ್ತದೆ. ಹಾಗಾಗಿ ಜಾಗರೂಕತೆಯಿಂದ ಬದುಕು ನಡೆಸುವುದು ಮುಖ್ಯ._
ಸಂಗ್ರಹ- ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳ ಅವಲೋಕನಕ್ಕೆ ಕೆಳಗಿನ ಕೊಂಡಿ ಪ್ರವೇಶಿಸಿ.
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ