ಚಾರುದತ್ತ ೧೬

👳‍♀ಚಾರುದತ್ತ ಬೆಳಕು- ೧೬👳‍♀

*मार्जार: प्लवने वृकोपसरणे श्येनो गृहालोकने निद्रा सुप्तमनुष्यवीर्यतुलने संसर्पणे पन्नग: । माया वर्णशरीरभेदकरणे वाग् देशभाषान्तरे दीपो रात्रिषु सङ्कटे च तिमिरं वायु: स्थले नौर्जले ।।*

_ಚಾರುದತ್ತನ ಮನೆ ಹೊಕ್ಕ ಕಳ್ಳ ತನ್ನ ಕುಶಲತೆಯನ್ನು ಹೇಳಿಕೊಳ್ಳುತ್ತಿದ್ದಾನೆ. ಕಳ್ಳನ ಅನೇಕ ಮಾತುಗಳನ್ನು ಕೇಳುತ್ತಿದ್ದರೆ ಭಾಸ ಬಹುಶಃ ಮೊದಲು ಕಳ್ಳನಾಗಿದ್ದನೇನೋ ಎಂಬ ಭಾವ ಬರುತ್ತದೆ. ಯಾವ ಯಾವ ವಿಷಯದಲ್ಲಿ ಯಾರು ಪರಿಣಿತರು ಅವರೆಲ್ಲರಂತೆ ನಾನು ಕಳ್ಳತನದಲ್ಲಿ ಎಂದು ಹೇಳುತ್ತಿದ್ದಾನೆ ಆ ಸಜ್ಜಲಕ. ಜಿಗಿದು ಓಡುವುದರಲ್ಲಿ ನಾನು ಬೆಕ್ಕಿನಂತೆ, ಪಲಾಯನ ಮಾಡುವುದರಲ್ಲಿ ತೋಳದಂತೆ, ಸುತ್ತಲಿನ ಪರಿಸ್ಥಿತಿ ಸೂಕ್ಷ್ಮವಾಗಿ ನೋಡುವುದರಲ್ಲಿ ಹದ್ದಿನಂತೆ, ಮಲಗಿರುವ ಮನುಷ್ಯರ ಶಕ್ತಿಯನ್ನು ಅಳೆಯುವುದರಲ್ಲಿ ಸಾಕ್ಷಾತ್ ನಿದ್ರೆಯಂತೆ, ತೆವಳಿಕೊಂಡು ಸಾಗುವುದರಲ್ಲಿ ಹಾವಿನಂತೆ, ದೇಹವನ್ನು ಕುಗ್ಗಿಸುವುದು ಅಥವಾ ಹಿಗ್ಗಿಸುವುದರಲ್ಲಿ ಮಾಯೆಯಂತೆ, ದೇಶ-ವಿದೇಶಗಳ ಭಾಷೆ ಅರಿಯುವುದರಲ್ಲಿ ಆ ದೇವಿ ಸರಸ್ವತಿಯಂತೆ, ಕತ್ತಲಲ್ಲಿ ದೀಪದಂತೆ, ಸಂಕಟ ಬಂದಾಗ ಕತ್ತಲಿನಂತೆ, ನೆಲದಲ್ಲಿ ಗಾಳಿಯಂತೆ, ಜಲದಲ್ಲಿ ನೌಕೆಯಂತೆ ನನ್ನ ಪರಾಕ್ರಮ ಇದೆ. ಯಾರಾದರೂ ಅಟ್ಟಿಸಿಕೊಂಡು ಬಂದರೆ ಗೋಡೆ ಮೊದಲಾದ ಎತ್ತರದ ಸ್ಥಳದಿಂದ ಜಿಗಿದು ಬೆಕ್ಕಿನಂತೆ ಕಣ್ತೆರೆಯುವುದರಲ್ಲಿ ಓಡಿಹೋಗುವೆ. ಆರಕ್ಷಕರು ಬರುವ ಸೂಚನೆ ದೊರೆತರೆ ತೋಳದಂತೆ ಕ್ಷಣಾರ್ಧದಲ್ಲಿ ಮರೆಯಾಗುವೆನು. ಮನೆಯ ಒಳಗಿನ ಪರಿಸ್ಥಿತಿ ಅವಲೋಕಿಸುವುದರಲ್ಲಿ ಹದ್ದಿನಷ್ಟೇ ಚುರುಕು ನನ್ನ ಕಣ್ಣುಗಳು. ಬಂಗಾರ, ದುಡ್ಡು, ಆಭರಣಗಳು ಎಲ್ಲೆಲ್ಲಿ ಇರಬಹುದೆಂದು ನನ್ನ ಕಣ್ಣುಗಳು ಕೂಡಲೇ ಗ್ರಹಿಸುತ್ತವೆ. ಹದ್ದಿನ ಕಣ್ಣು ವೀಕ್ಷಿಸುವುದರಲ್ಲಿ ಪ್ರಸಿದ್ಧ. ಹಾಗಾಗಿ ಕವಿ ಕಳ್ಳನಿಗೂ ಅದನ್ನೇ ಕೊಡಿಸಿದ್ದಾನೆ. ಮನುಷ್ಯನ ಶಕ್ತಿಯನ್ನು ಅಳೆಯುವುದು ನಿಜವಾಗಿ ಅವನ ನಿದ್ರೆ. ನಿದ್ರೆ ಮಾನವನ ಶಕ್ತಿಯನ್ನು ಕುಗ್ಗಿಸುವ ಮಾಧ್ಯಮವೂ ಹೌದು. ಹೆಚ್ಚು ನಿದ್ರಿಸಿದಷ್ಟು ಶಕ್ತಿಯ ನಷ್ಟ ಹೆಚ್ಚು. ಮಲಗಿರುವ ಮನುಷ್ಯನ ಶಕ್ತಿ ಎಷ್ಟು ಇರಬಹುದು, ಅವನು ಅಥವಾ ಅವಳು ತನ್ನ ಮೇಲೆ ಎಷ್ಟು ಪ್ರಹರಿಸಬಹುದು ಮುಂತಾದವನ್ನು ಅಂದಾಜಿಸುವಲ್ಲಿ ನಾನು ನಿದ್ರೆಯಂತೆಯೇ ಸರಿ. ಸರಿದು ಸರಸರನೆ ಹೋಗುವುದರಲ್ಲಿ ಹಾವಿನ ಚಾಲಾಕಿತನ ನನ್ನದು.  ಸಂದರ್ಭ ನೋಡಿ ದೇಹವನ್ನು ಮಾಯೆಯಂತೆ ಎಷ್ಟು ಬೇಕಾದರೂ ಕುಗ್ಗಿಸಿ ಅಡಗಿ ಉಳಿಯಬಲ್ಲೆ. ಯಾವ ಪ್ರದೇಶಕ್ಕೆ ಹೋದರೂ ಅವರಾಡುವ ಭಾಷೆ ನಾ ಬಲ್ಲೆ. ಹಾಗಾಗಿ ಸರಸ್ವತಿಯಂತೆ ಭಾಷಾದೇವಿ ನಾನು. ಕಳ್ಳರಿಗೆ ಹೆಚ್ಚಾಗಿ ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರುತ್ತದೆ. ಕಗ್ಗತ್ತಲೇ ಇರಲಿ ಏನೂ ಕಾಣದಿರಲಿ ನನಗಾವ ಚಿಂತೆಯೂ ಇಲ್ಲ. ಏಕೆಂದರೆ ನನಗೆ ನಾನೇ ದೀಪದಂತೆ ಸಂಚರಿಸುವೆ. ಕತ್ತಲಲ್ಲೂ ನೆಲವನ್ನು ಮನೆಗಳನ್ನು ಗುರುತಿಸಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದೇನೆ. ಆಪತ್ತು ಎದುರಾದರೆ ಕ್ಷಣದಲ್ಲಿ ಕತ್ತಲೆಯಂತೆ ಕಾಣದಾಗುವೆನು. ಎಲ್ಲರ ಎದುರಿಗೆ ಮರೆಯಾಗಿ ಹೋಗುವೆನು. ನೆಲದಲ್ಲಿ ಯಾವ ಮೂಲೆಯಲ್ಲಾದರೂ ಗಾಳಿಯಂತೆ ಕ್ಷಣಾರ್ಧದಲ್ಲಿ ಸಂಚರಿಸುವ ಸಾಮರ್ಥ್ಯ ನನ್ನದು. ಎಷ್ಟು ದೂರವಾದರೂ ಇಕ್ಕಟ್ಟಾದರೂ ಅಲ್ಲೆಲ್ಲಾ ನುಸುಳಿ ಹೊರಬರಬಲ್ಲೆ‌. ನೀರಿನಲ್ಲಿ ಸಿಕ್ಕಿಕೊಂಡೆ ಎಂದಾದರೆ ವೇಗದಿಂದ ಈಜಿ ನೌಕೆಯಂತೆ ನನ್ನನ್ನು ನಾನು ಪಾರುಮಾಡಿಕೊಳ್ಳಬಲ್ಲೆ. ಹಾಗಾಗಿಯೇ ನನಗೆ ಈ ಕಳ್ಳತನವು ಕಷ್ಟವಲ್ಲ. ಬಲು ಸಲೀಸು ಈ ಕೆಲಸ. ಕವಿ ಅವರವರ ವಿಶೇಷತೆಯನ್ನು ಸುಂದರವಾಗಿ ತೆರೆದಿಟ್ಟಿದ್ದಾನೆ ಈ ಶ್ಲೋಕದಲ್ಲಿ._

ಸಂಗ್ರಹ- ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳ ಅವಲೋಕನಕ್ಕೆ ಕೆಳಗಿನ ಕೊಂಡಿ ಪ್ರವೇಶಿಸಿ.‌


 http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩