ರಾಮಾಯಣ ೧೩೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೭ 🏝📖

*ತಮಪ್ರವಿಷ್ಟನ್ಯಗ್ರೋಧಂ ಬಲಿನಂ ರಾವಣಾತ್ಮಜಮ್ ವಿಧ್ವಂಸಯ ಶರೈಸ್ತೀಕ್ಷ್ಣೈಃ ಸರಥಂ ಸಾಶ್ವಸಾರಥಿಮ್*

_ವಿಭೀಷಣನ ಮಾತು. ಹನುಮನ ಜೊತೆ ಸೆಣಸಾಡುತ್ತಿರುವ ಅದೃಶ್ಯನಾಗಿ ಶತ್ರುಗಳನ್ನು ಸಂಹರಿಸುವ, ಇಂದ್ರಜಿತು ಆಲದ ಮರಗಳ ವನವನ್ನು ಇನ್ನೂ ಪ್ರವೇಶಿಸಿಲ್ಲ. ಈ ಕೂಡಲೇ ಅವನನ್ನು ಸಮೀಪಿಸಿ ಅಶ್ವ ಸಾರಥಿ ಸಹಿತ ರಥದೊಡನೆ ಮೇಲ್ಕಳಿಸಿಬಿಡು. ಇಲ್ಲಿ ನ್ಯಗ್ರೋಧ ವೃಕ್ಷಗಳ ವಿಶೇಷ ಏನೆಂಬುದು ಗೊತ್ತಾಗಿಲ್ಲ. ಏಕೆಂದರೆ ಒತ್ತೊತ್ತಾಗಿ ಆಲದ ಮರಗಳು ಬೆಳೆದ ಪ್ರದೇಶದಲ್ಲಿ ಏನೋ ವಿಶಿಷ್ಟ ಶಕ್ತಿ ಇರಬಹುದು ಅಥವಾ ಯಜ್ಞ ಕರ್ಮಗಳಿಗೆ ಅದು ಉತ್ತಮ ಪ್ರದೇಶವೆಂದು ಶಾಸ್ತ್ರ ವಿಹಿತ ಇರಬಹುದು. ಹಿಂದೆ ರಾಮನೂ ಐದು ಆಲದ ಮರಗಳಿರುವ ಪ್ರದೇಶವನ್ನು ತನ್ನ ವಾಸಸ್ಥಾನಕ್ಕೆ ಆರಿಸಿಕೊಳ್ಳುತ್ತಾನೆ. ಇಲ್ಲಿ ರಾವಣಾತ್ಮಜ ಮಾಡ ಹೊರಟದ್ದು ಮಾತ್ರ ಆಭಿಚಾರಿಕ ಕೃತ್ಯ._

*ನ ಜ್ಞಾತಿತ್ವಂ ನ ಸೌಹಾರ್ದಂ ನ ಜಾತಿಸ್ತವ ದುರ್ಮತೇ ಪ್ರಮಾಣಂ ನ ಚ ಸೋದರ್ಯಂ ನ ಧರ್ಮೋ ಧರ್ಮದೂಷಣಃ ಶೋಚ್ಯಸ್ತ್ವಮಸಿ ದುರ್ಬುದ್ಧೇ ನಿಂದನೀಯಶ್ಚ ಸಾಧುಭಿಃ ಯಸ್ತ್ವಂ ಸ್ವಜನಮುತ್ಸೃಜ್ಯ ಪರಭೃತ್ಯತ್ವಮಾಗತಃ*

_ಇಂದ್ರಜಿತು ರಾವಣನನ್ನು ನಿಂದಿಸುತ್ತಿದ್ದಾನೆ. ದುರಾತ್ಮ, ನಿನಗೆ ಬಂಧುತ್ವದ ಪರಿವೆ ಇಲ್ಲ, ಸ್ನೇಹವಿಲ್ಲ, ಜಾತಿಯಿಲ್ಲ, ಒಡಹುಟ್ಟಿದವನೆಂಬ ಗಣನೆ ಇಲ್ಲ, ಧರ್ಮದೂಷಕನಾದ ನಿನಗೆ ಧರ್ಮವೆಲ್ಲಿಂದ ಬಂದೀತು? ದುರ್ಬುದ್ಧಿಯಾದ ನಿನಗೆ ಎಷ್ಟು ಸಂಕಟಪಟ್ಟರೂ ಸಾಲದು, ಸಜ್ಜನರ ನಿಂದೆಗೆ ಪಾತ್ರನಾದವನು ನೀನು, ಸ್ವಜನರನ್ನು ಪರಿತ್ಯಜಿಸಿ ಪರರಿಗೆ ದಾಸನಾಗಿರುವೆ. ಇಲ್ಲಿ ವಿಭೀಷಣನ ಧರ್ಮಬುದ್ಧಿ ನಮಗೆಲ್ಲ ಸದಾ ಗ್ರಾಹ್ಯ. ರಾಮಾಯಣ ಬರಿದೆ ಓದಿ ವರ್ಷಗಟ್ಟಲೆ ಪ್ರವಚನ ಮಾಡಿದರೆ ಸಾಲದು. ತನ್ನ ಬಂಧುಗಳೆಂಬ ಮಮಕಾರ ಧರ್ಮಾಧರ್ಮದ ಪ್ರಶ್ನೆ ಬಂದಾಗ ಕಿತ್ತು ಹಾಕಬೇಕು. ಸ್ನೇಹದ ಬಂಧನ ಧರ್ಮದ ವಿಷಯಕ್ಕೆ ತಡೆ ಆಗಬಾರದು. ನಮ್ಮ ಜಾತಿಯವರು ಎಂಬ ಹಂಗೂ ಬಿಡಬೇಕು. ಕೊನೆಗೆ ಅನಿವಾರ್ಯವೆನಿಸಿದರೆ ಸೋದರ್ಯ ಭಾವವನ್ನೂ ಬಿಡುವುದೇ ನಿಜವಾದ ಧರ್ಮದ ಆಚರಣೆ. ಧರ್ಮಾಭಿಮುಖತೆಯೇ ನಮ್ಮ ಜಾತಿ ಮತ ಸ್ನೇಹ ಸೋದರ್ಯ ಬಂಧುತ್ವ. ಲೋಕದಲ್ಲಿ ಅನೇಕ ವಿದ್ವಾಂಸರು, ಸನ್ಯಾಸಿಗಳು, ಪಂಡತರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ. ತನ್ನ ಜಪ ತಪ ಅನುಷ್ಠಾನ ಪ್ರವಚನ ಮೊದಲಾದವನ್ನು ಎಷ್ಟು ಶ್ರದ್ಧೆ ವಹಿಸಿ ಮಾಡಿದರೂ ಅಧಿಕಾರ ಹುದ್ದೆ ಮೊದಲಾದವನ್ನು ಕೊಡುವಾಗ ಅಣ್ಣ ತಮ್ಮ ಮಕ್ಕಳು ಬಂಧುಗಳು ಇವೇ ಭಾವದಿಂದ ಹೆಚ್ಚು ಅರ್ಹರಿರುವಾಗಲೂ ಅನರ್ಹರಿಗೆ ಕೊಟ್ಟು ಅಧರ್ಮದ ದಾರಿ ಹಿಡಿಯುತ್ತಾರೆ. ಅಲ್ಲಿಗೆ ಅವರ ಧರ್ಮದ ತಂತುವನ್ನು ಈ ಸ್ನೇಹವು ತುಂಡರಿಸುತ್ತದೆ. ವಿಭೀಷಣನು ತನಗೆ ಮುಂದೆ ಏನಾಗಬಹುದು ಎಂಬ ಯಾವ ವಿಷಯದ ಬಗೆಗೂ ಚಿಂತಿಸದೇ ಮುಂದುವರೆದ ಕಾರಣ ರಾಮನ ಕೃಪೆಗೆ ಪಾತ್ರನಾದ. ಅರ್ಜುನನ ಪ್ರಶ್ನೆಯೂ ಇದೇ ಭಾರತದಲ್ಲಿ- *ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ*  ಎಂದು. ಕೃಷ್ಣನ ಮಾತು ಯಾರು ಸ್ವಜನರು ಎಂಬುದು ಮೊದಲು ಅರಿ ಎಂದು. ವಿಭೀಷಣನ ದಾರಿ ಅನುಸರಿಸಲು ರಾಮನ ಸ್ಮರಣೆ ಸದಾ ಮಾಡೋಣ._




ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.in/

ಕಾಮೆಂಟ್‌ಗಳು