ಪದಶಕ್ತಿ ೨೩
📝📕ಪದ ಶಕ್ತಿ ೨೩📕📝
*ದುರ್ಗಾ*
_ಪಾರ್ವತಿಯ ಮತ್ತೊಂದು ಹೆಸರು. ದುರ್ಗ ಶಬ್ದಕ್ಕೆ ಹನ್ನೊಂದು ಅರ್ಥಗಳಿವೆ. ರಾಕ್ಷಸರು, ದೊಡ್ಡ ತೊಂದರೆ ಅಥವಾ ವಿಘ್ನ, ಭವಬಂಧನ, ಕೆಟ್ಟ ಕರ್ಮ, ಶೋಕ, ದುಃಖ, ನರಕ, ಯಮನ ಶಿಕ್ಷೆ, ಪುನರ್ಜನ್ಮ, ಮಹಾಭಯ, ಗುಣವಾಗದ ಅರ್ಬುದಾದಿ ರೋಗಗಳು. ಇವುಗಳನ್ನೆಲ್ಲ ದೂರಮಾಡುವವಳು ಆ ತಾಯಿ ದುರ್ಗೆ. ಆದರೆ ಅಲ್ಲೊಂದು ತೊಂದರೆಯೂ ಇದೆ. *ದುಃಖೇನ ಗಮ್ಯತೇ ಅಥವಾ ಜ್ಞಾಯತೇ ಇತಿ ದುರ್ಗಾ* ಎಂಬ ಮಾತಿನಂತೆ ಅವಳನ್ನು ಅರಿಯುವುದು, ಅರಿತು ಪೂಜಿಸುವುದು, ಪೂಜಿಸಿ ಅನುಗ್ರಹ ಸಂಪಾದಿಸುವುದು ಬಹಳ ಕಷ್ಟ. ಹಾಗೆ ನೀವು ಶತಪ್ರಯತ್ನಪಟ್ಟರೆ ಒಲಿದು ಮೇಲೆ ಹೇಳಿದ ದುರ್ಗಗಳನ್ನೆಲ್ಲಾ ದೂರಮಾಡುವಳು._
_ದ ಎಂಬ ಅಕ್ಷರ ದೈತ್ಯರ ನಾಶಸೂಚಕ, ಉ ಕಾರವು ವಿಘ್ನನಾಶದ ಸೂಚಕ, ರ ಕಾರವು ರೋಗಪರಿಹಾರ ಸೂಚಕ, ಗ ಕಾರವು ಪಾಪನಾಶಕ, ಆ ಕಾರವು ಹೆದರಿಕೆ ಹಾಗೂ ಶತ್ರುಗಳ ನಾಶಕ. ಹೀಗೆ ದುರ್ಗಾ ಎಂದು ಭಕ್ತಿಯಿಂದ ಕರೆದರೆ ಆ ಅಮ್ಮ ನಮ್ಮ ಎಲ್ಲಾ ತೊಂದರೆಯನ್ನು ಓಡಿಸುವಳು. ನವರಾತ್ರಿಯಲ್ಲಿ ಕನ್ನಿಕೆಯರ ಆರಾಧನೆಯಲ್ಲಿ ದುರ್ಗಾರಾಧನೆ ಎಂದರೆ ಒಂಭತ್ತು ವರ್ಷದ ಹುಡುಗಿ ಎಂದು ಅರ್ಥ. ನವವರ್ಷ ಪ್ರಾಪ್ತಳಾದ ಬಾಲಕಿ ದುರ್ಗೆ ಎನ್ನಿಸುವಳು. ನೀಲಿಬಣ್ಣದ ಮರ, ಸೋಲದವಳು, ದೈನ್ಯ ಹಾಗೂ ದುರ್ಗತಿಯನ್ನು ನಾಶಮಾಡುವ ಪಾರ್ವತಿ ಹೀಗೆ ತುಂಬಾ ಅರ್ಥಗಳಿವೆ. ಅರಿತೋ ಅತರಿಯದೆಯೋ ದುರ್ಗಾ ಎನ್ನಿ ಕಷ್ಟ ಕಳೆದುಕೊಳ್ಳಿ._
ಸಾಹಿತ್ಯದ ಹಲವೆಡೆ ಈ ಪದ ಪ್ರಯೋಗಿಸಲ್ಪಟ್ಟಿದೆ.
*दुर्गे स्मृता हरसि भीतिमशेषजन्तोः*। ಸಪ್ತಶತಿಯ ಪ್ರಸಿದ್ಧ ಶ್ಲೋಕ. ಅರ್ಥ ಸರಳವಾಗಿದೆ.
ಎಲ್ಲಿಗೆ ಗಮನವಿದು ದುರ್ಗಾಂಬಿಕೆ
ಎಲ್ಲಿಗೆ ಗಮನವಿದು ಪ.
ಗಮನ ಹರವಲ್ಲಭೆ ನೀ ದಯ-
ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ.
ಚಂಡಿಕೆ ಮಹಮ್ಮಾಯೆ ದೇವಿ ಪ್ರ-
ಚಂಡ ಲೋಕತಾಯೆ
ಖಂಡಪರಶುಪ್ರಿಯೆ ಅಖಿಲ ಭೂ-
ಮಂಡಲಕಧಿಪತಿಯೆ
ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ-
ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ1
ಪಾವಂಜೆ ಲಕ್ಷ್ಮೀನಾರ್ಣಪ್ಪಯನವರ ಈ ಕೀರ್ತನೆಯಲ್ಲಿ ದುರ್ಗೆಯ ಸ್ತುತಿ ಸೊಗಸಾಗಿದೆ.
ಸಂಗ್ರಹ. ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗಾಗಿ ವೀಕ್ಷಿಸಿ http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ