ರಾಮಾಯಣ ೧೨೩
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೨೩
*ಆವಾಂ ತು ದೃಷ್ಟ್ವಾ ಪತಿತೌ ವಿಸಂಜ್ಞೌ ನಿವೃತ್ತಯುದ್ಧೌ ಗತರೋಷಹರ್ಷೌ ಧ್ರುವಂ ಪ್ರವೇಕ್ಷ್ಯತ್ಯಮರಾರಿವಾಸಮಸೌ ಸಮಾದಾಯ ರಣಾಗ್ರಲಕ್ಷ್ಮೀಮ್*
_ಇಂದ್ರಜಿತು ಆಭಿಚಾರಿಕ ಯಜ್ಞದಲ್ಲಿ ಬ್ರಹ್ಮಾಸ್ತ್ರವನ್ನು ಆಹ್ವಾನಿಸಿ ಅದರ ಬಲದ ಮೂಲಕ ವಾನರಸೇನೆಯನ್ನೆಲ್ಲ ಉಗ್ರವಾಗಿ ತರಿದನು. ಮಾಯಾಯುದ್ಧವನ್ನು ಆಶ್ರಯಿಸಿ ವಾನರರು ಎತ್ತ ನೋಡಿದರತ್ತ ಆಯುಧಗಳು ಅಪ್ಪಳಿಸುವಂತೆ ಮಾಡಿದನು. ಮುಖ್ಯವಾಗಿ ಹನುಮಂತ, ಸುಗ್ರೀವ, ಅಂಗದ, ಗಂಧಮಾದನ, ಜಾಂಬವಂತ, ಸುಷೇಣ, ವೇಗದರ್ಶಿ, ಮೈಂದ, ದ್ವಿವಿದ, ನೀಲ, ನಳ, ಗವಾಕ್ಷ, ಗಜ ಹೀಗೆ ಕಪಿಸೇನೆಯ ವೀರರನ್ನು ಗುರಿಯಾಗಿಸಿ ಅವರನ್ನು ಸಾವಿರಾರು ಬಾಣಗಳಿಂದ ಕೆತ್ತಿದನು. ಅನಂತರ ಅವನು ರಾಮ ಲಕ್ಷ್ಮಣರೆಡೆಗೆ ದೃಷ್ಟಿ ಹರಿಸಿ ಬಾಣಗಳ ಮಳೆ ಸುರಿಸಿದಾಗ ರಾಮನಾಡುವ ಮಾತು. ತಮ್ಮ, ಲಕ್ಷ್ಮಣ ಈ ರಾಕ್ಷಸನು ಬ್ರಹ್ಮಾಸ್ತ್ರ ಆಶ್ರಯಿಸಿ ಮೆರೆಯುತ್ತಿದ್ದಾನೆ. ಅದೃಶ್ಯನಾಗಿರುವ ಅವನ ಸಾವಿನ ದಾರಿ ಕಷ್ಟ. ಬ್ರಹ್ಮನ ಮಹಿಮೆ ಅರಿತು ನಾವೀಗ ಇದನ್ನು ಸಹಿಸಿಕೊಳ್ಳೋಣ. ಪ್ರಾಜ್ಞನಾದ ನಿನಗೆ ಹೆಚ್ಚೇನು ಹೇಳಲಿ! ನಾವೀಗ ರಣೋತ್ಸಾಹ ಅಥವಾ ರೋಷವನ್ನು ತೋರದೇ ಮೂರ್ಛೆ ಹೊಂದಿದವರಂತೆ ನೊಂದು ಮಲಗೋಣ. ವಿಜಯಿಯಾದೆಯೆಂದು ಭಾವಿಸಿ ಅವನು ಹಿಂತಿರುಗುವನು. ಮುಂದೆ ನಮ್ಮ ಗೆಲುವಿನ ಬಗೆಗೆ ಚಿಂತಿಸೋಣ. ವರಬಲ ಶತ್ರುವಿನ ಕಡೆಗೆ ಇದ್ದಾಗ ಯೋಚಿಸಿ ಮುಂದಡಿ ಇಡಬೇಕು. ಲಕ್ಷ್ಮಣ ಸಹಜವಾದ ಕೋಪದ ಪ್ರವೃತ್ತಿ ಉಳ್ಳವನು. ಹಾಗಾಗಿ ರಾಮನು ಅವನಿಗೆ ಮೊದಲು ಹೇಳುತ್ತಾನೆ. ಯುದ್ದದಲ್ಲಿ ತಾನೊಬ್ಬನೇ ಮೆರೆಯಬೇಕೆಂದು ಬಯಸುವವನು ಉತ್ತಮ ಯೋಧನಾಗಲಾರ. ಶತ್ರುವು ಬಲಿಷ್ಠನಾಗಿದ್ದಾಗ ಅದನ್ನು ಗೌರವಿಸಿ ದುರ್ಬಲನಾದಾಗ ಮತ್ತೆ ಹೋರಾಡಿ ಗೆಲ್ಲುವುದೂ ಒಂದು ಯುದ್ಧ ತಂತ್ರ. ದೈವಬಲ ಈಗ ಮೇಘನಾದನ ಪರವಾಗಿದೆ. ಹಾಗಾಗಿ ಇಂದಿನ ಮಟ್ಟಿಗೆ ಅವನು ವಿಜಯಿಯಾಗಲಿ. ಮುಂದೆ ಅವನ ನಿಗ್ರಹದ ದಾರಿ ಹುಡುಕೋಣ ಎಂಬ ರಾಮನ ಉಪಾಯ ಎಲ್ಲಾ ಸಂದರ್ಭದಲ್ಲಿ ಮಾದರಿ. ಶತ್ರುವಿನಿಂದ ಹೆಚ್ಚಿನ ಹಾನಿ ಉಂಟಾಗದಂತೆ ತಡೆಯಲು ಇಂತಹ ತಾತ್ಕಾಲಿಕ ಶರಣಾಗತಿ ತುಂಬಾ ಸಹಕಾರಿ. ಈಗಿನ ಕಾಲದ ಕೆಲವು ಸಂದರ್ಭಗಳಲ್ಲೂ ಶತ್ರು ಪ್ರಬಲನಾಗಿದ್ದಾಗ ಹೆಚ್ಚು ಪ್ರತಿರೋಧ ತೋರದೇ ಸುಮ್ಮನಿದ್ದು ಅವನು ನಿದ್ರಿಸುವ ಸಮಯದಲ್ಲಿ ಮರ್ಮಾಘಾತ ಉಂಟುಮಾಡುವ ತಂತ್ರ ರಾಮಾಯಣದ್ದೇ ಕೊಡುಗೆ._
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ