ರಾಮಾಯಣ ೧೨೨
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೨೨
*ಗತಾಯುಷಂ ಭೂಮಿತಲೇ ಶಯಾನಂ ಶಿತೈಃ ಶರೈರಾಚಿತಸರ್ವಗಾತ್ರಮ್ ಇಮಾಂ ಪ್ರತಿಜ್ಞಾಂ ಶೃಣು ಶಕ್ರಶತ್ರೋಃ ಸುನಿಶ್ಚಿತಾಂ ಪೌರುಷದೈವಯುಕ್ತಾಮ್*
_ಅತಿಕಾಯಾದಿಗಳ ಮರಣದಿಂದ ನೊಂದ ರಾವಣನೆದುರು ಬಂದ ಇಂದ್ರಜಿತ್ ಹೀಗೆ ಪ್ರತಿಜ್ಞೆ ಮಾಡುತ್ತಾನೆ. ಅಪ್ಪಾ, ಹೆದರದಿರು. ನನ್ನ ಬಾಣಗಳು ದೇಹದೆಲ್ಲೆಡೆ ಹೊಕ್ಕು ಪ್ರಾಣ ಹೋದ ಸ್ಥಿತಿಯಲ್ಲಿರುವ ರಾಮನನ್ನು ನೀನಿಂದು ನೋಡಬಹುದು. ದೈವಬಲವನ್ನೂ ಪೌರುಷಬಲವನ್ನೂ ಒಂದುಗೂಡಿಸಿ ಮಾಡುವ ಈ ಪ್ರತಿಜ್ಞೆಯನ್ನು ಕೇಳು. ಇಲ್ಲಿ ಇಂದ್ರಜಿತು ರಾಕ್ಷಸನಾದರೂ ಅವನ ಈ ಕೊನೆಯ ಮಾತು ಸಾಧುವಾಗಿದೆ. ಪ್ರತಿಯೊಂದು ಕಾರ್ಯ ನಡೆಯಲು ಎರಡು ಕಾರಣ ಮುಖ್ಯ. ದೈವಬಲ ಇರಲೇಬೇಕು, ಜೊತೆಗೆ ಪುರುಷ ಪ್ರಯತ್ನವೂ ನೂರಕ್ಕೆ ನೂರರಷ್ಟು ಇದ್ದಾಗ ಮಾತ್ರ ಯಶಸ್ಸು ಸಿದ್ಧ. ಅದಿಲ್ಲದೇ ದೈವಬಲವಿಲ್ಲದೆ ನಮ್ಮ ಯಾವ ಪ್ರಯತ್ನವೂ ಫಲಕಾರಿಯಾಗದು ಅಥವಾ ದೈವಬಲವಿದ್ದರೂ ಪರಿಶ್ರಮವಿಲ್ಲದ ಯಾವ ಕೆಲಸವೂ ಸಾಗದು. ಹಾಗಾಗಿ ಎರಡೂ ಇದ್ದಾಗ ಮಾತ್ರ ಕೆಲಸ ಸುಗಮ. ರಾಮಲಕ್ಷ್ಮಣರನ್ನು ಹೀಗೆ ಮಾಡುವೆ ಹಾಗೆ ಮಾಡುವೆ ಎಂದೆಲ್ಲಾ ಪ್ರತಿಜ್ಞೆ ಮಾಡಿದ ಅವನು ಅಪ್ಪನ ಆಶೀರ್ವಾದ ಪಡೆದು ಯಜ್ಞ ಮಾಡಲೆಂದು ಸೈನಿಕರನ್ನು ಅಡ್ಡ ನಿಲ್ಲಿಸುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶ ಅಪ್ಪನ ಆಶೀರ್ವಾದ ಪಡೆಯುವುದು. ಅಪ್ಪನಿಗಿಂತ ಮಿಗಿಲಾದ ವೀರನಾದರೂ ಇಂದ್ರಜಿತುವು ಹಿರಿಯರ ಆಶೀರ್ವಾದ ಪಡೆದೇ ಮುಂದುವರೆಯುವ ಒಳ್ಳೆಯ ಸಂಪ್ರದಾಯ ತೋರಿಸಿಕೊಟ್ಟಿದ್ದಾನೆ. ಈಗಿನ ನಾವು ಅವರಿಗೇನು ನಮಸ್ಕಾರ, ಅವರ ಆಶೀರ್ವಾದ ಕಟ್ಟಿಕೊಂಡು ನಮಗೇನು ಲಾಭ ಎಂದೆಲ್ಲಾ ಯೋಚಿಸುತ್ತಾ ಹಿರಿಯರ ಬಗ್ಗೆ ಅಸಡ್ಡೆ ತಾಳುತ್ತೇವೆ. ಅದು ಎಂದಿಗೂ ಶ್ರೇಯಸ್ಕರವಲ್ಲ. ರಾಕ್ಷಸರಾದರೂ ಕೆಲಮಟ್ಟಿಗೆ ಅವರ ವರ್ತನೆ ನಾಗರಿಕ ಸಮಾಜಕ್ಕಿಂತ ಮಿಗಿಲಾಗಿದ್ದದ್ದು ವಿಶೇಷ._
*ಸ ಹವಿರ್ಲಾಜಸಂಸ್ಕಾರೈರ್ಮಾಲ್ಯಗಂಧಪುರಸ್ಕೃತೈಃ*
*ಲೋಹಿತಾನಿ ಚ ವಾಸಾಂಸಿ ಸ್ರುವಂ ಕಾರ್ಷ್ಣಾಯಸಂ ತಥಾ*
_ಅಗ್ನಿಯನ್ನು ಸ್ಥಾಪಿಸಿ ಲಾಜಾಸಂಸ್ಕಾರ ಮಾಡಿ ಎಂಬ ಮಾತಿದೆ. ನಮ್ಮಲ್ಲಿ ಪ್ರತಿಯೊಂದು ಯಜ್ಞದ ಆರಂಭದಲ್ಲಿ ಅರಳು ಮತ್ತು ಸಾಸಿವೆಯನ್ನು ಮಿಶ್ರ ಮಾಡಿ ಚೆಲ್ಲಿ ಸ್ಥಲಶುದ್ಧಿ ಮಾಡುವ ಕ್ರಮ ಈಗಲೂ ಇದೆ. ಎಲ್ಲೆಡೆ ಈ ಪ್ರಯೋಗ ಇಲ್ಲ. ಬಹುಶಃ ಲಾಜಾಸಂಸ್ಕಾರ ಅಂದರೆ ಇದೇ ಇರಬೇಕು. ಅಗ್ನಿಗೆ ಗಂಧ ಮಾಲೆ ಮೊದಲಾದವುಗಳನ್ನು ಅರ್ಪಿಸಿ ವಿಭೀತಕ ಎಂಬ ವೃಕ್ಷದ ಸಮಿಧೆಗಳಿಂದ ಹೋಮ ಮಾಡುತ್ತಾನೆ. ಕನ್ನಡದಲ್ಲಿ ತಾರೆಯ ಮರವೆಂದು ಇದನ್ನೇ ಕರೆಯುತ್ತಾರೆ. ಇಲ್ಲಿ ಕೆಂಪುಬಣ್ಣದ ವಸ್ತ್ರಗಳನ್ನೂ ಹಾಗೂ ಕಬ್ಬಿಣದ ಸ್ರುವ ಅಂದರೆ ತುಪ್ಪ ಹಾಕುವ ಸೌಟನ್ನು ಬಳಸುತ್ತಾನೆ ಇಂದ್ರಜಿತು. ನಾವೀಗ ಲೋಕರೂಢಿಯಂತೆ ಸಾಮಾನ್ಯವಾಗಿ ಎಲ್ಲಾ ಹೋಮಗಳಲ್ಲಿ ಪೂರ್ಣಾಹುತಿಗೆಂದು ಕೆಂಪು ಬಟ್ಟೆ ಬಳಸುತ್ತೇವೆ. ಆದರೆ ಅದು ಆಭಿಚಾರಿಕ ಕೃತ್ಯದಲ್ಲಿ ಇಂದ್ರಜಿತು ಉಪಯೋಗಿಸಿದ ಬಣ್ಣ. ಹಾಗಾಗಿ ಆ ಬಣ್ಣದ ಬಟ್ಟೆ ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಬರುತ್ತದೆ. ಕಬ್ಬಿಣದ ಸ್ರುವದಿಂದ ಹೋಮ ಮಾಡುವುದು ಆಭಿಚಾರಿಕ ಕೃತ್ಯಗಳಲ್ಲಿ ಮಾತ್ರ. ಲೋಹಗಳಲ್ಲಿ ನಿಕೃಷ್ಟವಾದ ಕಬ್ಬಿಣದ ಬಳಕೆ ಈಗ ಕುಂಡದಿಂದ ಹಿಡಿದು ಸ್ಟೀಲ್ ತಟ್ಟೆಯ ತನಕ ಸರ್ವಸಾಮಾನ್ಯವಾಗಿದೆ. ನಮ್ಮ ಉದ್ದೇಶ ಯಾರನ್ನಾದರೂ ಕೊಲ್ಲುವುದಿದ್ದರೆ ಇಂತಹ ಬಳಕೆ ಸರಿಯಾಗಿ ಕಾರ್ಯ ನಡೆಯಬಹುದು. ಹಾಗಿಲ್ಲದೆ ಒಳ್ಳೆಯ ಉದ್ದೇಶಕ್ಕೆ ಇಂತಹ ಸಾಮಗ್ರಿ ಉಪಯೋಗಿಸಿದರೆ ಹೇಗೆ ಒಳ್ಳೆಯ ಫಲ ದೊರಕೀತು! ಜೀವಂತವಾದ ಕಪ್ಪು ಬಣ್ಣದ ಮೇಕೆಯ ಕತ್ತನ್ನು ಅವನು ಬಲಿಕೊಡುತ್ತಾನೆ. ಇಲ್ಲೂ ಗಮನಿಸಬೇಕಾದ ಅಂಶ ಇದು ಸದುದ್ದೇಶದ ಕರ್ಮವಲ್ಲ. ಹಾಗಾಗಿ ಹಿಂಸೆ ಇದೆ ಎಂಬುದು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ