ಚಾರುದತ್ತ ೧೭
👳♀ಚಾರುದತ್ತ ಬೆಳಕು- ೧೭👳♀
*निश्वासोस्य न शङ्कितो न विषमस्तुल्यान्तरं जायते गात्रं सन्धिषु दीर्घतामुपगतं शय्याप्रमाणाधिकम् । दृष्टिर्गाढनिमीलिता न चपलं पक्ष्मान्तरं जायते दीपं चैव न मर्षयेदभिमुख: स्याल्लक्ष्मसुप्तो यदि।*
_ಕಳ್ಳನು ಚಾರುದತ್ತನ ಮನೆ ಪ್ರವೇಶಿಸಿ ಅಮೂಲ್ಯ ವಸ್ತುಗಳನ್ನು ಹುಡುಕುತ್ತಿರುವನು. ಆ ಸಮಯದಲ್ಲಿ ವಿದೂಷಕನು ಚಿನ್ನದ ನಾಣ್ಯಗಳ ಚೀಲದ ಬಗ್ಗೆ ಮಾತನಾಡಿದಾಗ ಅವನು ನಿದ್ರೆಯಲ್ಲಿ ಮಾತನಾಡಿದ್ದೇ ಅಥವಾ ಎಚ್ಚರ ಇದ್ದು ಮಾತನಾಡಿದ್ದೇ ಎಂಬುದನ್ನು ಪರೀಕ್ಷೇ ಮಾಡುತ್ತಾ ಆಡುವ ಮಾತು- ಖಂಡಿತವಾಗಿ ಇವನು ನಿದ್ರಿಸಿದ್ದಾನೆ. ಏಕೆಂದರೆ ಉಸಿರಿನ ಗತಿಯಲ್ಲಿ ವ್ಯತ್ಯಾಸವಿಲ್ಲ. ಮನುಷ್ಯ ಎಚ್ಚರವಿದ್ದಾಗ ಉಸಿರಿನ ಗತಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಆದರೆ ನಿದ್ರೆಯಲ್ಲಿ ಇದ್ದಾಗ ಒಂದೇ ಬಗೆಯ ವೇಗ ಹಾಗೂ ಗಾಳಿಯ ಬಿಡುವಿಕೆ ಕಂಡುಬರುತ್ತದೆ. ಇನ್ನು ದೇಹದ ಗಂಟುಗಳು ಸಡಿಲವಾಗಿ ಎಲ್ಲೆಡೆ ಚಾಚಿರುವ ಕಾರಣ ನಿದ್ರೆ ಗಾಢವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಎಚ್ಚರಿಕೆ ಇದ್ದಾಗ ಕಾಲು ಹಾಗೂ ಕೈ ಗಂಟುಗಳು ಬಿಗಿದಿರುತ್ತವೆ. ಅದೇ ಮಲಗಿದ್ದಾಗ ಪೂರ್ತಿ ಸಡಿಲವಾಗಿ ಹೆಚ್ಚಿನ ಜಾಗವನ್ನು ಅಪೇಕ್ಷಿಸುತ್ತವೆ. ಈ ವಿದೂಷಕನ ದೇಹ ಹಾಸಿಗೆಯನ್ನು ಮೀರಿ ಹೊರಗೂ ವ್ಯಾಪಿಸಿದೆ. ಹಾಗಾಗಿ ನಿದ್ರೆಯ ಅಮಲಿನಲ್ಲಿ ನೆಲ ಹಾಗೂ ಹಾಸಿಗೆಯ ವ್ಯತ್ಯಾಸ ಮರೆತು ಬಿಟ್ಟಿದ್ದಾನೆ. ಇನ್ನು ಮುಖ್ಯವಾಗಿ ಒಬ್ಬನ ಕಣ್ರೆಪ್ಪೆಯನ್ನು ನೋಡಿ ನಿದ್ರಿಸಿರುವನೇ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಇವನ ರೆಪ್ಪೆಯಾದರೋ ಮುಟ್ಟಿದರೂ ಚಲಿಸಲೊಲ್ಲದು. ಅಂಟಿಸಿದಂತೆ ಮುಚ್ಚಿಕೊಂಡಿದೆ. ಕೇವಲ ಕಣ್ಣು ಮುಚ್ಚಿದಾಗಲೂ ರೆಪ್ಪೆಯ ಕುಣಿತ ನಡೆಯುತ್ತದೆ. ಆದರೆ ನಿದ್ರಿಸುತ್ತಿರುವಾಗ ಮಾತ್ರ ಅದು ಸಾಧ್ಯವಿಲ್ಲ. ಇವನ ಮೊಗದ ಲಕ್ಷಣ ಯಾವ ರೀತಿಯಲ್ಲೂ ಎಚ್ಚರ ಇಲ್ಲದಿರುವುದನ್ನು ಸಾರುತ್ತಿದೆ. ಕೊನೆಯದಾಗಿ ಒಂದು ವೇಳೆ ಸ್ವಲ್ಪ ಎಚ್ಚರದಲ್ಲಿದ್ದರೂ ಎದುರಿಗೆ ಉರಿಯುತ್ತಿರುವ ದೀಪವನ್ನು ಕ್ಷಣಕಾಲವೂ ಸಹಿಸುತ್ತಿರಲಿಲ್ಲ. ಈಗ ಮಾತ್ರ ದೀಪದ ಬೆಳಕನ್ನೂ ಅರಿಯದವನಂತೆ ನಿದ್ರಿಸುವ ಪರಿ ನನ್ನ ಚೌರ್ಯಕ್ಕೆ ಬಹಳ ಪೂರಕವಾಗಿದೆ. ನಿದ್ರಿತನ ಲಕ್ಷಣಗಳನ್ನು ಕವಿ ಸುಂದರವಾಗಿ ಶಬ್ದಗಳಲ್ಲಿ ಸೆರೆಹಿಡಿದಿದ್ದಾನೆ._
ಸಂಗ್ರಹ- ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳ ಅವಲೋಕನಕ್ಕೆ ಕೆಳಗಿನ ಕೊಂಡಿ ಪ್ರವೇಶಿಸಿ.
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ