ಪದಶಕ್ತಿ ೨೯

🏹*ಪದಶಕ್ತಿ* ---೨೯🌄

*ಮೋದಕ*

_ಮುದ ಧಾತುವಿನಿಂದ ಹುಟ್ಟಿದ ಪದ. ಣಿಚ್ ಮತ್ತು ಣ್ವುಲ್ ಪ್ರತ್ಯಯದಿಂದ ಹುಟ್ಟಿದ ಪದ. ಆನಂದ ಹುಟ್ಟಿಸುವ ಅರ್ಥ ಮೇಲ್ನೋಟಕ್ಕೆ ಕಾಣುವಂತಹದು. *ಮೋದಯತಿ ಬಾಲಾನ್* ಅಂದರೆ ಮಕ್ಕಳನ್ನು ಸಂತೋಷ ಪಡಿಸುವ ಬೆಲ್ಲ, ಸಕ್ಕರೆ ಅಥವಾ ಅವುಗಳ ಭಕ್ಷ್ಯಗಳೆಲ್ಲವೂ ಮೋದಕಗಳೇ ಆಗಿವೆ._

_*ಮೋದಕಂ ಸ್ವಾದುಸಂಯುಕ್ತಂ ಶರ್ಕರಾದಿ ವಿನಿರ್ಮಿತಮ್* ಎಂದು ರುಚಿಕರವಾಗಿರಬೇಕು ಹಾಗೂ ಸಕ್ಕರೆಯಿಂದ ಕೂಡಿರಬೇಕು ಎಂಬ ಲಕ್ಷಣ ಇದಕ್ಕೆ ಹೇಳಿದ್ದಾರೆ.ನಮ್ಮಲ್ಲಿ ಸಿಹಿಕಡುಬು, ಕರಿಕಡುಬು ಎಂದೆಲ್ಲಾ ನಾಮಾಂತರಗಳನ್ನು ಇದೇ ಪದಾರ್ಥ ಹೊಂದಿದೆ._

_ಗಣಪತಿಗೆ ಮಾತ್ರ ಯಾಕೆ ಮೋದಕ ಎಂದರೆ  ಅಗ್ನಿಪುರಾಣದ ಮಾತು ಹೀಗಿದೆ-_ *ಮೋದಕಾದಿಭಿರ್ಗಣೇಶಾದಿ ಪೂಜನಂ*
_ಎಂದು. ಗಣಪತಿಯ ಆರಾಧನೆಗೆ ಹೀಗೆ ಪುರಾಣೋಕ್ತವಾದ ಖಾದ್ಯವೇ ಮೋದಕ. ಬಾಯಿಚಪಲಕ್ಕೆ ಅಡುಗೆಯವರು ಅಥವಾ ಮಹಿಳೆಯರು ಆರಂಭಿಸಿದ್ದಲ್ಲ ಆಧುನಿಕ ತರಹೇವಾರಿ ಖಾದ್ಯಗಳಂತೆ._

_ಮೋದಕ ಎನ್ನುವುದು ಒಂದು ಬಗೆಯ ಆಯುರ್ವೇದ ಔಷಧವೂ ಹೌದು. ಆರು ತಿಂಗಳು ಅತ್ಯಂತ ಪರಿಣಾಮ ಬೀರುವ ಸಕ್ಕರೆ ಮಿಶ್ರಿತವಾಗಿರುವ ಒಂದು ಬಗೆಯ ಔಷಧ._ *ಪಾಂಡುರೋಗಹರ ಮೋದಕ ಕಥನಮ್* _ಎಂದು ಗರುಡ ಪುರಾಣ ಇದನ್ನು ಉಲ್ಲೇಖಿಸುತ್ತದೆ._

_ಇದು ಜಾತಿಗಳ ಹುಟ್ಟಿನ ಒಂದು ಪದವೂ ಹೌದು. ಶೂದ್ರ ಸ್ತ್ರೀಯರಲ್ಲಿ ಕ್ಷತ್ರಿಯರು ಸೇರಿ ಹಡೆದ ಮಗು ಮೋದಕ ಎಂಬ ಒಂದು ಜಾತಿಗೆ ಸೇರುತ್ತದೆ. ಇವರಿಗೆ ಯಾಕೆ ಈ ಹೆಸರು ಎಂದರೆ ಸಿಹಿಖಾದ್ಯಗಳನ್ನು ತಯಾರಿಸುವುದರಲ್ಲಿ ಈ ಜಾತಿಯವರು ಅತ್ಯಂತ ಪರಿಣತರು, ಪ್ರಸಿದ್ಧರು.ಮೃಷ್ಟಾನ್ನ ತಯಾರಿಕೆಯಲ್ಲಿ ಮೈರಾ ಎಂಬ ಹೆಸರಿನಿಂದ ಇವರು ಪ್ರಸಿದ್ಧರು. ಹಾಗಾಗಿ ಅವರಿಗೆ ಈ ಹೆಸರು. ಹಿಂದೆ ಒಂದು ಜಾತಿಗೆ ಹೆಸರಿಡುವಾಗ ವೃತ್ತಿ ಗಮನಿಸಿ ಅಥವಾ ಅದರ ಆಧಾರದ ಮೇಲೆ ಇಡುತ್ತಿದ್ದರೇ ಹೊರತು ಈಗಿನ ಮೀಸಲಾತಿಗಾಗಿ ಇಟ್ಟುಕೊಳ್ಳುವ ಹುಟ್ಟಿಕೊಳ್ಳುವ ಜಾತಿಗಳಂತಲ್ಲ‌._

_ಇನ್ನೊಂದು ಸಾಮಾನ್ಯ ಅರ್ಥ ಸಂತೋಷ ಕೊಡುವವ ಮೋದಕ. ಮೋದಂ ಜನಯತಿ ಎಂದು ಅರ್ಥ. ಮಿತ್ರರು, ಬಂಧುಗಳು, ಮಕ್ಕಳು, ಪತ್ನಿ-ಪತಿ ಹೀಗೆ ಸಂತೋಷ ಕೊಡುವವರು ಯಾರಿದ್ದರೂ ಅವರೆಲ್ಲರೂ ಮೋದಕರು. ಭಗವಂತನ ಆನಂದ ನೀಡುವಿಕೆ ಉಳಿದವರಿಗಿಂತ ಮಿಗಿಲು ಹಾಗೂ ಸಾರ್ವಕಾಲಿಕ. ಹಾಗಾಗಿ ಅವನೇ ನಿಜಾರ್ಥದ ಮೋದಕ._

* ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ ||ಪ||
ಸರೋರುಹಾಸನ ಕೌರವನಾಶನಗಿನ್ನು ಸಂಭ್ರಮ ಮೋದಕ ಪಲ್ಲವಪಾಣಿ ||ಅ||*

ದಾಸರ ಈ ಕೀರ್ತನೆಯಲ್ಲಿ ಮೋದಕದ ಉಲ್ಲೇಖ ಇದೆ. ಅರ್ಥ ಸರಳ.ಭೀಮನು ಸಿಹಿ ಖಾದ್ಯ ಪ್ರಿಯನು. 

ನಿಜಮತಿಯನೆ ನೀಡೊ ಪ.
ಭುಜಗ ಭೂಷಣಸುತ ರಜತಮ ಕಳೆಯುತ
ಗಜವರದನ ತೋರೊ ಅ.ಪ.
ಮೋದಕಪ್ರಿಯನೆ ಆದರದಲಿ ನಿನ್ನ
ಪಾದಕೆ ಎರಗುವೆನೊ
ನೀ ದಯದಲಿ ಹರಿ ವಿಶ್ವರೂಪವ

ಅಂಬಾಬಾಯಿಯ ಈ ಪದದಲ್ಲೂ ಮೋದಕ ಪ್ರಿಯ ಗಣೇಶನ ಸ್ತುತಿ ಇದೆ.

_ಇನ್ನು ಸಹಸ್ರಮೋದಕ, ನೂರು ಮೋದಕ,ಲಕ್ಷಮೋದಕ ಎಂದೆಲ್ಲಾ ಅರ್ಪಿಸುವ ವಿಧಾನ ಬೆಳೆದುಬಂದಿದ್ದು ಭಗವಂತನು ಪೂರ್ಣನು, ಅವನಿಗೆ ಏನನ್ನಾದರೂ ಅರ್ಪಿಸುವಾಗ ಪೂರ್ಣ ಸಂಖ್ಯೆಯ ಅರ್ಪಣೆ ವಿಹಿತವಾದುದು. ಹಾಗಾಗಿ ಅಂತಹ ಪದ್ಧತಿ ಪರಂಪರೆ ಬೆಳೆದುಬಂದಿದೆ. ಮೋದಕ ತಿಂದು ಮೋದ ಕೊಡುವ ಹೊಂದುವ ಮನೋಭಾವ ನಮ್ಮಲ್ಲಿ ಬೆಳೆಯಲಿ ಉಳಿಯಲಿ ಎಂದು ಆಶಿಸುತ್ತಾ ಗಣಪತಿಗೆ ನಿವೇದಿಸಿ ಮೋದಕ ತಿನ್ನೋಣ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗಾಗಿ ಒಮ್ಮೆ ಇಣುಕಿ-

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩