ಶಾಕುಂತಲ ಸುರಭಿ ಎರಡು

🌺🌿🌺🌿🌺🌿🌺🌿🌺🌿🌺

          ಶಾಕುಂತಲದ ಕುಸುಮ ಸರಣಿ

          ಶ್ರೀನಿಧಿ ಅಭ್ಯಂಕರ್

🌺🌿🌺🌿🌺🌿🌺🌿🌺🌿🌺


ಶಾಕುಂತಲದ ಕುಸುಮ -1

04/07/2016

ಶಾಕುಂತಲದ ಒಂದು ಕುಸುಮ: ಅಭಿಮುಖೇ ಮಯಿ ಸಂಹೃತಮೀಕ್ಷಿತಂ ಹಸಿತಮನ್ಯನಿಮಿತ್ತಕೃತೋದುಮ್ / ವಿನಯವಾರಿತವೃತ್ತಿರತಸ್ತಯಾ ನ ವಿವೃತೋ ಮದನೋ ನ ಚ ಸಂವೃತ: // ವಿದೂಷಕನ ಬಳಿ ದುಷ್ಯಂತನು ಶಕುಂತಲೆಯ ಚರ್ಯೆಯನ್ನು ವರ್ಣಿಸುತ್ತಿರುವನು. ನಾನು ನೇರವಾಗಿ ಅವಳನ್ನು ನೋಡಿದಾಗಲೆಲ್ಲ ತನ್ನ ದೃಷ್ಟಿಯನ್ನು ಹಿಂದೆಗೆದುಕೊಳ್ಳುತ್ತಿದ್ದಳು. ( ನನ್ನ ನೋಟವನ್ನು ಎದುರಿಸಲು ನಾಚಿಕೊಳ್ಳುತ್ತಿದ್ದಳು) ಅದೇ ಸಮಯದಲ್ಲಿ ಬೇರೊಂದು ನೆವದಿಂದ ನಗುತ್ತಿದ್ದಳು. ಹುಟ್ಟಿನಿಂದ ಬೆಳೆದುಬಂದ ಪರಿಸರದ ಸೌಜನ್ಯವು ಅವಳ ಅಭಿವ್ಯಕ್ತಿಗೆ ತಡೆಯಾಗಿತ್ತು. ಹೀಗಾಗಿ ಅವಳ ಪ್ರೇಮವು ಅಷ್ಟೊಂದು ಸ್ಪಷ್ಟವಾಗಿಯೂ ಇರಲಿಲ್ಲ ಹಾಗಂತ ಮತ್ತೆ ಮತ್ತೆ ನೋಟ ನಗು ಇದ್ದಿದ್ದರಿಂದ ಗುಟ್ಟಾಗಿಯೂ ಇರಲಿಲ್ಲ. ನನ್ನೆಡೆಗೆ ನೋಡಿ ನಗುವ ಹಂಬಲವಿದ್ದರೂ ಬೇರೆಯವರು ತಪ್ಪು ತಿಳಿದಾರೆಂದು ಅಥವಾ ಆಶ್ರಮವಾಸಿಗಳು ಏನಂದುಕೊಳ್ಳುವರೋ ಎಂಬ ಕಾರಣದಿಂದಲೋ ಏನೋ ಅಥವಾ ಸ್ತ್ರೀಯರ ಸ್ವಭಾವ ಸಹಜ ನಾಚಿಕೆಯಿಂದಲೋ ಏನೋ ನನ್ನನ್ನು ನೋಡಿಯೂ ನೋಡದವಳಂತೆ ಕಣ್ಣಿಗೆ ಕಣ್ಣು ಕೊಡದೆ ಮಧ್ಯದಲ್ಲಿ ನಕ್ಕು ಬೇಸರವಿಲ್ಲವೆಂದು ಸೂಚಿಸುತ್ತಾ ಪ್ರೀತಿ ತೋರಿಸುತ್ತಿದ್ದ ರೀತಿ ಹೆಚ್ಚು ಸ್ಪಷ್ಟವೂ ಅಲ್ಲ ಹೆಚ್ಚು ಮುಚ್ಚುಮರೆಯೂ ಅಲ್ಲ ಎನ್ನುವಂತಿತ್ತು. ಶಕುಂತಲೆಯ ನಯವಾದ ಅನುರಾಗ ಪ್ರದರ್ಶನ, ದುಷ್ಯಂತನ ಸೂಕ್ಷ್ಮವಾದ ನಿರೀಕ್ಷಣೆಯ ಸೊಗಸಾದ ಚಿತ್ರಣ. ನಮ್ಮ ಭಾವನೆಗಳ ಅಭಿವ್ಯಕ್ತತೆ ಕೆಲವೊಮ್ಮೆ ಹೀಗೆ ಇರುತ್ತದೆ. ಗುರುತಿದ್ದರೂ ಮಾತಾಡಿಸದೆ ನಗುವ ಸಂದರ್ಭದಲ್ಲಿ ಗಾಂಭೀರ್ಯವೂ ದು:ಖದ ಸಮಯದಲ್ಲಿ ಸ್ಥಿತಪ್ರಜ್ಞತೆಯೂ ಹೀಗೆ ವ್ಯಕ್ತವಾಗುತ್ತದೆ.

ಸಂಗ್ರಹ ಶ್ರೀನಿಧಿ ಅಭ್ಯಂಕರ್.


🌺🌿🌺🌿🌺🌿🌺🌿🌺🌿🌺

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩