ಪದಸಂಪದ 16
📝📕ಪದ ಸಂಪದ ೧೬📕📝
*ಲಕ್ಷ್ಮೀ*
_ಎಲ್ಲರಿಗೂ ಎಂದಿಗೂ ಬೇಕಾದವಳು. ಸುಖಾಸಕ್ತರಿಗೆ ಸಂಪತ್ತಿಗಾಗಿ, ಮೋಕ್ಷಾರ್ಥಿಗಳಿಗೆ ದೇವನೊಲುಮೆ ಕರುಣಿಸಲು ಸದಾ ಇವಳ ವರ ಬೇಕೇಬೇಕು.
ಉದ್ಯೋಗ ಶೀಲನನ್ನು, ನೀತಿವಂತನನ್ನು, ಧರ್ಮಜ್ಞನನ್ನು ಲಕ್ಷ್ಯವಿಟ್ಟು ಪೊರೆವ ಕಾರಣ ಅವಳು ಲಕ್ಷ್ಮೀ. ಪ್ರಕೃತಿ ಸೌಂದರ್ಯವು ಲಕ್ಷ್ಮಿಯ ರೂಪವೇ ಸರಿ. ಮೊಗದ ಮೇಲಿನ ಕಾಂತಿಯೂ ಲಕ್ಷ್ಮಿಯೇ. ಸಕಲ ಬಗೆಯ ಸಂಪತ್ತು ಲಕ್ಷ್ಮೀ ಪದದ ಅರ್ಥ. ದೇಹಕ್ಕೆ ರೋಗ ಬರದಂತೆ ತಡೆಯುವ ಔಷಧಿಯೂ ಲಕ್ಷ್ಮಿ. ನೆಲದ ಮೇಲೆ ಬೆಳೆಯುವ ಒಂದು ಜಾತಿಯ ಕಮಲವು ಲಕ್ಷ್ಮಿ. ದಿನವೂ ಪೂಜೆಗೋ ಅಡಿಗೆಗೋ ಬಳಸುವ ಅರಿಶಿನ ಅದೂ ಲಕ್ಷ್ಮಿ. ರತುನಗಳಲ್ಲಿ ಒಂದಾದ ಮುತ್ತು ಹಾಗೂ ದ್ರವ್ಯಗಳು ಲಕ್ಷ್ಮಿಯ ರೂಪ. ತಡೆಯಲಾಗದ ನೋವು ಅದೂ ಲಕ್ಷ್ಮಿ. ಕೊನೆಯದಾಗಿ ವೇಶ್ಯೆ ಎಂಬ ಅರ್ಥವೂ ಈ ಪದಕ್ಕಿದೆ. ಲಕ್ಷ್ಮಿ ಯ ಉಪಯೋಗ ನಮ್ಮಲ್ಲಿ ಹಿತಮಿತವಾಗಿ ಇರಲಿ._
ಸಾಹಿತ್ಯದ ಕೆಲವೆಡೆ ಈ ಪದ್ಯದಲ್ಲಿ ನೋಡೋಣ.
पूजय- ल्लक्ष्मीं शुक्लपक्षे गुरोर्दिने । ಪ್ರತೀ ಶುಕ್ಲಪಕ್ಷದ ಗುರುವಾರ ಲಕ್ಷ್ಮಿಯನ್ನು ಪೂಜಿಸಬೇಕೆಂದು ಶಾಸ್ತ್ರ ಸಾರುತ್ತದೆ.
ದಾಸರ ಶೋಭಾನೆ ಪದ್ಯ ದಲ್ಲಿ ಹೀಗಿದೆ.
ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಲಕ್ಷುಮಿ ಉದಿಸಿದಳು
ಬಾಲೆ ಮಹಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||
ಆ ಲಕ್ಷ್ಮಿ ನಮ್ಮೆಲ್ಲರನ್ನೂ ಸದಾ ಹರಸಲೆಂದು ಆಶಿಸೋಣ, ಪ್ರಾರ್ಥಿಸೋಣ.
ಸಂಗ್ರಹ. ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ