ರಾಮಾಯಣ ೬೧
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೬೧
*ಭವಂತಂ ಸರ್ವಭೂತಾನಾಂ ಶರಣ್ಯಂ ಶರಣಂ ಗತಃ*
_ವಿಭೀಷಣನನ್ನು ರಾಮನ ಮಾತಿನಂತೆ ಸುಗ್ರೀವ ಕರೆತಂದಿದ್ದಾನೆ. ಆಗ ನಮಸ್ಕರಿಸಿ ಅವನಾಡುವ ಮಾತು. ಶ್ರೀರಾಮ, ನೀನು ಎಲ್ಲಾ ಜೀವಿಗಳಿಗೂ ಶರಣ್ಯನು,ರಕ್ಷಕನಾಗಿರುವೆ. ಅಂತಹ ಮಹಿಮನಾದ ನಿನ್ನನ್ನು ಶರಣು ಹೊಕ್ಕಿರುವೆ. ರಾಮನು ಕೇವಲ ಮನುಷ್ಯರಿಗೆ ಮಾತ್ರ ಪ್ರೀತಿ ತೋರುವುದಲ್ಲ, ಸಕಲ ಜೀವಿಗಳಲ್ಲೂ ಇದೇ ಭಾವ ಹೊಂದಿದ್ದನೆಂಬುದು ತಿಳಿಯುತ್ತದೆ. ಕಾಕಾಸುರನ ಪ್ರಸಂಗದಲ್ಲಿ ಕಾಗೆಯನ್ನು ರಕ್ಷಿಸುವ ಉದಾರತೆ, ಜಟಾಯುವಿಗಾಗಿ ಮರುಗುವ ಸನ್ನಿವೇಶ ಇವೆಲ್ಲವೂ ನಿದರ್ಶನಗಳು._
*ಭವದ್ಗತಂ ಮೇ ರಾಜ್ಯಂ ಚ ಜೀವಿತಂ ಚ ಸುಖಾನಿ ಚ*
_ಭಕ್ತಿಯ ಪ್ರಕಾರಗಳಲ್ಲಿ ಶರಣಾಗತಿಯೂ ಒಂದು. ಭಗವಂತನನ್ನು ನಾವು ಶರಣು ಹೊಂದುವುದೆಂದರೆ ಸಂಪೂರ್ಣವಾಗಿ ನಮ್ಮನ್ನು ಅರ್ಪಿಸಿಕೊಳ್ಳಬೇಕು. ವಿಭೀಷಣನ ಮಾತು ಅದೇ- ನನ್ನ ರಾಜ್ಯ, ನನ್ನ ಜೀವಿತ, ನನ್ನ ಸೌಖ್ಯ ಇವೆಲ್ಲವೂ ನಿನಗೇ ಸೇರಿದ್ದು. ನೀನು ಕೊಟ್ಟರೆ ಯಾವುದನ್ನಾದರೂ ಸ್ವೀಕರಿಸಬಲ್ಲೆ, ಬೇಡವೆಂದರೆ ಹಾಗೇ ಉಳಿಯಬಲ್ಲೆ ಎಂಬ ಭಾವದ ಈ ಮಾತು ಶರಣಾಗತಿ ರೂಪದ ಭಕ್ತಿಗೆ ಉತ್ತಮ ಉದಾಹರಣೆ. ನಾವು ಒಂದಷ್ಟು ಇಟ್ಟುಕೊಂಡು ದೇವರಲ್ಲಿ ಬೇಡುವ ಕಾರಣ ದೇವರೂ ಒಂದಷ್ಟು ಇಟ್ಟುಕೊಂಡೇ ಕೊಡುವನು. ನಾವು ಸಂಪೂರ್ಣ ಅರ್ಪಿಸಿದಾಗ ಅವನೂ ಸಂಪೂರ್ಣ ಅನುಗ್ರಹಿಸುವನು. ಮುಂದೆ ಯುದ್ಧಾನಂತರ ಇಡೀ ಲಂಕೆಯನ್ನೆಲ್ಲ ವಿಭೀಷಣನಿಗೆ ನೀಡಿ ರಾಮ ಬಂದ ಹಾಗೆಯೇ ಹೊರಟು ಹೋಗುವನು. ವಿಭೀಷಣನ ಶರಣಾಗತಿ ನಮ್ಮಲ್ಲೂ ಇರಲಿ._
*ಅವಧ್ಯಃ ಸರ್ವಭೂತಾನಾಂ ದೇವದಾನವರಕ್ಷಸಾಮ್*
_ರಾವಣನಿಗಿದ್ದ ವರವನ್ನು ವಿಭೀಷಣ ಹೇಳುತ್ತಿದ್ದಾನೆ. ದೇವತೆಗಳಾಗಲೀ, ದಾನವರಾಗಲೀ, ರಾಕ್ಷಸರಾಗಲಿ ಯಾರೂ ಅವನನ್ನು ಕೊಲ್ಲಲು ಸಾಧ್ಯವಿಲ್ಲ ಎಂಬುದೇ ವಿಧಾತನ ವರ. ಕೆಲವು ಆಯಾ ದೇವಪಕ್ಷಪಾತಿಗಳು ಕೊಲ್ಲಲು ಅವಕಾಶ ಇದ್ದರೂ ರಾಮನಿಂದಲೇ ಸಾವು ನಿಶ್ಚಯಿಸಿದ್ದರಿಂದ ಬಿಟ್ಟರು ಎಂದೆಲ್ಲಾ ಪ್ರತಿಪಾದಿಸುತ್ತಾರೆ. ಆದರೆ ಅದು ವಾದವಷ್ಟೇ.ಸತ್ಯವಲ್ಲ.ಸತ್ಯ ಅವನಿಗೆ ಇದ್ದ ಅವಧ್ಯತ್ವ. ಬೇರಾರಿಂದಲೂ ಸಾಧ್ಯವಾಗದಿದ್ದಾಗ ರಾಮನು ವಧಿಸಿದ._
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ